ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಇಲಿಗಳು ಲಂಚದ ಹಣ ತಿಂದು ಹಾಕಿವೆ ಎಂದ ಬಿಹಾರ ಪೊಲೀಸರು - ಸುಪ್ರೀಮ್‌ ಕೋರ್ಟ್ ಅಚ್ಚರಿ

ಹೊಸದಿಲ್ಲಿ: ಲಂಚ ಸ್ವೀಕಾರ ಪ್ರಕರಣದಲ್ಲಿ ವಶಪಡಿಸಿಕೊಂಡು ಪೊಲೀಸ್ ಠಾಣೆಯ ಸಾಕ್ಷ್ಯಾಧಾರ ಕೊಠಡಿಯಲ್ಲಿ ಇರಿಸಲಾಗಿದ್ದ ನೋಟುಗಳನ್ನು ಇಲಿಗಳು ತಿಂದು ನಾಶಪಡಿಸಿವೆ ಎಂಬ ಬಿಹಾರ ಪೊಲೀಸರ ಹೇಳಿಕೆಗೆ ಸುಪ್ರೀಂ ಕೋರ್ಟ್ ತೀವ್ರ ಅಚ್ಚರಿ ವ್ಯಕ್ತಪಡಿಸಿದೆ. ಇದೇ ವೇಳೆ, ಪ್ರಕರಣದ ಪ್ರಮುಖ ಸಾಕ್ಷ್ಯವೇ ನಾಶವಾಗಿರುವುದನ್ನು ಗಮನಿಸಿ, ಈ ಪ್ರಕರಣದಲ್ಲಿ ಶಿಕ್ಷೆಗೆ ಗುರಿಯಾಗಿದ್ದ ಮಾಜಿ ಮಕ್ಕಳ ಕಲ್ಯಾಣ ಕಾರ್ಯಕ್ರಮ ಅಧಿಕಾರಿ ಅರುಣಾ ಕುಮಾರಿಯವರಿಗೆ ಸುಪ್ರೀಂ ಕೋರ್ಟ್ ಜಾಮೀನು ಮಂಜೂರು ಮಾಡಿದೆ.

ನ್ಯಾಯಮೂರ್ತಿಗಳಾದ ಜೆ.ಬಿ. ಪರ್ದಿವಾಲಾ ಹಾಗೂ ಕೆ.ವಿ. ವಿಶ್ವನಾಥನ್ ಅವರನ್ನೊಳಗೊಂಡ ನ್ಯಾಯಪೀಠವು, ಅರುಣಾ ಕುಮಾರಿಯವರಿಗೆ ವಿಧಿಸಲಾಗಿದ್ದ ನಾಲ್ಕು ವರ್ಷಗಳ ಜೈಲು ಶಿಕ್ಷೆಯನ್ನು ಅಮಾನತುಗೊಳಿಸಿ, ಅವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲು ಆದೇಶ ನೀಡಿತು.

ವಿಚಾರಣೆ ವೇಳೆ, "ನೋಟುಗಳನ್ನು ಇಲಿಗಳು ನಾಶಪಡಿಸಿವೆ ಎಂಬುದನ್ನು ತಿಳಿದು ನಮಗೆ ಅಚ್ಚರಿಯಾಗಿದೆ" ಎಂದು ನ್ಯಾಯಪೀಠ ಹೇಳಿದೆ. ವಶಪಡಿಸಿಕೊಂಡ ನೋಟುಗಳು ನಾಶವಾಗಿರುವುದರಿಂದ ಬಿಹಾರ ಸರ್ಕಾರಕ್ಕೆ ಗಮನಾರ್ಹ ಪ್ರಮಾಣದ ಆದಾಯ ನಷ್ಟ ಉಂಟಾಗಿದೆ ಎಂದೂ ನ್ಯಾಯಪೀಠ ಅಭಿಪ್ರಾಯಪಟ್ಟಿತು.

ಪ್ರಕರಣದ ವಿವರ ಹೀಗಿದೆ: 2019ರಲ್ಲಿ ಮಕ್ಕಳ ಕಲ್ಯಾಣ ಕಾರ್ಯಕ್ರಮ ಅಧಿಕಾರಿಯಾಗಿದ್ದ ಅರುಣಾ ಕುಮಾರಿ ಅವರು ₹10,000 ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎಂಬ ಆರೋಪದ ಮೇರೆಗೆ ಬಿಹಾರದ ಆರ್ಥಿಕ ಅಪರಾಧ ದಳ ಕಾರ್ಯಾಚರಣೆ ನಡೆಸಿತ್ತು. ಈ ವೇಳೆ ಅರುಣಾ ಕುಮಾರಿ ಅವರ ಬಳಿಯಿಂದ ನಗದು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದರು. ವಶಪಡಿಸಿಕೊಂಡ ಈ ನೋಟುಗಳನ್ನು ಎನ್ವಲಪ್‌ನಲ್ಲಿ ಸಂಗ್ರಹಿಸಿ, ವಿಚಾರಣೆಯ ವೇಳೆ ಪ್ರಾಥಮಿಕ ಸಾಕ್ಷ್ಯವಾಗಿ ನ್ಯಾಯಾಲಯಕ್ಕೆ ಹಾಜರುಪಡಿಸಲು ಸ್ಥಳೀಯ ಪೊಲೀಸ್ ಠಾಣೆಯ ಸಾಕ್ಷ್ಯಾಧಾರ ಕೊಠಡಿಯಲ್ಲಿ ಇರಿಸಲಾಗಿತ್ತು. ಆದರೆ, ಬಳಿಕ ಆ ನೋಟುಗಳನ್ನು ಇಲಿಗಳು ಕಚ್ಚಿ ನಾಶಪಡಿಸಿವೆ ಎಂದು ಪೊಲೀಸರು ನ್ಯಾಯಾಲಯಕ್ಕೆ ಮಾಹಿತಿ ನೀಡಿದ್ದರು.

Edited By : Nagaraj Tulugeri
PublicNext

PublicNext

06/05/2026 05:41 pm

Cinque Terre

1.83 K

Cinque Terre

0

ಸಂಬಂಧಿತ ಸುದ್ದಿ