ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದೇಣಿಗೆ ನಿರಾಕರಿಸಿದ್ದಕ್ಕೆ ದಲಿತ ಕುಟುಂಬದ ಮೇಲೆ ಅಮಾನುಷ ಹಲ್ಲೆ: ಧರ್ಮದ ಹೆಸರಲ್ಲಿ ದೌರ್ಜನ್ಯ

ಮಧ್ಯಪ್ರದೇಶದ ಛತ್ತರ್‌ಪುರ ಜಿಲ್ಲೆಯ ಮಹಾರಾಜ್‌ಗಂಜ್ ಗ್ರಾಮದಲ್ಲಿ ಅಮಾನವೀಯ ಘಟನೆಯೊಂದು ನಡೆದಿದೆ. ದೇವಸ್ಥಾನದ ದೇಣಿಗೆಗಾಗಿ ಕೇಳಿದಷ್ಟು ಗೋಧಿ ನೀಡಲು ಸಾಧ್ಯವಿಲ್ಲ ಎಂದ ದಲಿತ ಕುಟುಂಬವೊಂದರ ಮೇಲೆ ಭೀಕರವಾಗಿ ಹಲ್ಲೆ ನಡೆಸಲಾಗಿದ್ದು, ಧರ್ಮ ಮತ್ತು ದೇಣಿಗೆಯ ಹೆಸರಿನಲ್ಲಿ ನಡೆದ ಈ ದಾಳಿಯಲ್ಲಿ ಇಡೀ ಕುಟುಂಬ ರಕ್ತಸಿಕ್ತಗೊಂಡಿದೆ.

ಹೌದು ದೇವಸ್ಥಾನದ ದೇಣಿಗೆಗಾಗಿ ಕೇಳಿದಷ್ಟು ಗೋಧಿ ನೀಡಲು ನಿರಾಕರಿಸಿದ ದಲಿತ ಕುಟುಂಬದ ಮೇಲೆ ಜಾತಿ ನಿಂದನೆಗೈದು ಭೀಕರ ಹಲ್ಲೆ ನಡೆಸಲಾಗಿದೆ.

ವರದಿಗಳ ಪ್ರಕಾರ, ಗ್ರಾಮದ ಕೆಲವು ಪ್ರಭಾವಿ ವ್ಯಕ್ತಿಗಳ ಗುಂಪೊಂದು ದೇವಸ್ಥಾನದ ದೇಣಿಗೆಗಾಗಿ ಗೋಧಿ ಸಂಗ್ರಹಿಸಲು ದಲಿತ ಕುಟುಂಬದ ಮನೆಗೆ ತೆರಳಿತ್ತು. ಈ ವೇಳೆ, "ನಮ್ಮ ಶಕ್ತಿಗನುಗುಣವಾಗಿ ಈಗಾಗಲೇ ದೇಣಿಗೆ ನೀಡಿದ್ದೇವೆ. ನೀವು ಕೇಳಿದಷ್ಟು ಹೆಚ್ಚಿನ ಪ್ರಮಾಣದ ಗೋಧಿ ನೀಡಲು ನಮಗೆ ಸಾಧ್ಯವಿಲ್ಲ. ನಾವೇ ಎಲ್ಲವನ್ನೂ ದಾನ ಮಾಡಿದರೆ ಇಡೀ ವರ್ಷ ನಮ್ಮ ಮಕ್ಕಳಿಗೆ ಏನು ತಿನ್ನಿಸಲಿ?" ಎಂದು ಕುಟುಂಬವು ಅಳಲು ತೋಡಿಕೊಂಡಿದೆ.

ಕುಟುಂಬದ ಈ ಉತ್ತರದಿಂದ ಕೆರಳಿದ ಹಲ್ಲೆಕೋರರು, ತಕ್ಷಣವೇ ಜಾತಿ ನಿಂದನೆ ಮಾಡಿ ಕುಟುಂಬದ ಸದಸ್ಯರನ್ನು ಮನೆಯಿಂದ ಹೊರಗೆ ಎಳೆದು ತಂದಿದ್ದಾರೆ. ನಂತರ, ಕಲ್ಲು, ಇಟ್ಟಿಗೆ, ದೊಣ್ಣೆ ಮತ್ತು ಕಬ್ಬಿಣದ ರಾಡ್‌ಗಳಿಂದ ಮನಬಂದಂತೆ ಹಲ್ಲೆ ನಡೆಸಿದ್ದಾರೆ. ಈ ಬರ್ಬರ ದಾಳಿಯಲ್ಲಿ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಐವರು ತೀವ್ರವಾಗಿ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅಷ್ಟೇ ಅಲ್ಲದೆ, ಅವರ ಬಳಿಯಿದ್ದ ಅಲ್ಪಸ್ವಲ್ಪ ಗೋಧಿಯನ್ನು ಸಹ ಬಲವಂತವಾಗಿ ಕಿತ್ತುಕೊಂಡು ಹೋಗಿದ್ದಾರೆ ಎಂದು ಸಂತ್ರಸ್ತ ಕುಟುಂಬ ಆರೋಪಿಸಿದೆ.

ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತುಕೊಂಡ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಸ್ಥಳೀಯ ಇನ್ಸ್‌ಪೆಕ್ಟರ್ ಅಶುತೋಷ್ ಶ್ರೋತಿ, "ದೇವಸ್ಥಾನದ ದೇಣಿಗೆ ವಿಚಾರವಾಗಿ ಗಲಾಟೆ ನಡೆದಿದೆ. ಎಸ್‌ಸಿ/ಎಸ್‌ಟಿ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ. ಮತ್ತೊಬ್ಬ ಆರೋಪಿ ತಲೆಮರೆಸಿಕೊಂಡಿದ್ದು, ಆತನ ಪತ್ತೆಗೆ ಕಾರ್ಯಾಚರಣೆ ಮುಂದುವರಿದಿದೆ," ಎಂದು ಮಾಹಿತಿ ನೀಡಿದ್ದಾರೆ.

ಪೊಲೀಸರು ಕ್ರಮ ಕೈಗೊಂಡಿದ್ದರೂ, ಸಂತ್ರಸ್ತ ಕುಟುಂಬವು ತಮ್ಮ ಅಸಮಧಾನವನ್ನು ವ್ಯಕ್ತಪಡಿಸಿದೆ. ಅವರ ಪ್ರಕಾರ, ಇದು ಕೇವಲ ಕ್ಷಣಿಕ ಆವೇಶದಲ್ಲಿ ನಡೆದ ಘಟನೆಯಲ್ಲ, ಬದಲಿಗೆ ಧರ್ಮದ ಹೆಸರಿನಲ್ಲಿ ತಮ್ಮ ಮೇಲೆ ನಡೆಸಿದ ವ್ಯವಸ್ಥಿತ ದೌರ್ಜನ್ಯ ಎಂದು ದೂರಿದ್ದಾರೆ. ದೇಣಿಗೆ ಎಂಬುದು ಸ್ವಇಚ್ಛೆಯಿಂದ ಇರಬೇಕೇ ಹೊರತು, ಬಲವಂತದಿಂದಲ್ಲ ಎಂದು ಕುಟುಂಬದ ಸದಸ್ಯರು ಹೇಳಿದ್ದಾರೆ.

Edited By : Nirmala Aralikatti
PublicNext

PublicNext

06/05/2026 04:30 pm

Cinque Terre

5.94 K

Cinque Terre

0

ಸಂಬಂಧಿತ ಸುದ್ದಿ