ಪಣಜಿ: ಮೋಜು-ಮಸ್ತಿಗಾಗಿ ಗೋವಾ ಕಡಲತೀರಕ್ಕೆ ತೆರಳುವ ಪ್ರವಾಸಿಗರಿಗೆ ಎಚ್ಚರಿಕೆಯ ಗಂಟೆಯೊಂದು ಮೊಳಗಿದೆ. ರೋಚಕ ಅನುಭವ ನೀಡಬೇಕಿದ್ದ ಪ್ಯಾರಾಸೈಲಿಂಗ್ ಸಾಹಸವೊಂದು ಯುವತಿಯೊಬ್ಬಳ ಪಾಲಿಗೆ ಪ್ರಾಣಾಪಾಯವಾಗಿ ಪರಿಣಮಿಸಿದ ಘಟನೆ ಬೆಳಕಿಗೆ ಬಂದಿದೆ.
ನ್ಯೂಟ್ರಿಷನಿಸ್ಟ್ ಆಗಿರುವ ಸುಶ್ಮಿತಾ ಗೌರವ್ ಎಂಬುವವರು ಇತ್ತೀಚೆಗೆ ಗೋವಾದಲ್ಲಿ ಪ್ಯಾರಾಸೈಲಿಂಗ್ ಮಾಡುತ್ತಿದ್ದಾಗ ಈ ದುರಂತ ಸಂಭವಿಸಿದೆ. ಹಾರಾಟದ ಮಧ್ಯದಲ್ಲೇ ತಾಂತ್ರಿಕ ದೋಷದಿಂದ ಅವರು ಸಮುದ್ರಕ್ಕೆ ಬಿದ್ದಿದ್ದಾರೆ. ಈ ವೇಳೆ ಪ್ಯಾರಾಸೈಲಿಂಗ್ ಹಗ್ಗವು ಅವರ ಕುತ್ತಿಗೆಗೆ ಬಿಗಿಯಾಗಿ ಸುತ್ತಿಕೊಂಡಿದ್ದು, ಅವರು ಉಸಿರಾಡಲು ಪರದಾಡಿದ್ದಾರೆ.
ಈ ಭೀಕರ ಕ್ಷಣದ ವಿಡಿಯೋವನ್ನು ಸುಶ್ಮಿತಾ ತಮ್ಮ ಇನ್ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದು, ಈಗಾಗಲೇ 23 ಲಕ್ಷಕ್ಕೂ ಹೆಚ್ಚು ಜನರು ಇದನ್ನು ವೀಕ್ಷಿಸಿದ್ದಾರೆ.
ತಮ್ಮ ಭೀಕರ ಅನುಭವವನ್ನು ಬರೆದುಕೊಂಡಿರುವ ಸುಶ್ಮಿತಾ, "ಸಮುದ್ರದ ಮಧ್ಯೆ ಬಿದ್ದಾಗ ಕುತ್ತಿಗೆಗೆ ಹಗ್ಗ ಬಿಗಿದಿತ್ತು. ಆ ಕ್ಷಣದ ಭಯವನ್ನು ಯಾವುದೇ ಕ್ಯಾಮೆರಾ ಹಿಡಿಯಲು ಸಾಧ್ಯವಿಲ್ಲ. ನಾವು ಸಾವಿನ ಹತ್ತಿರವಿದ್ದೇವೆ ಎಂದು ಅರಿವಾದಾಗ ಉಂಟಾಗುವ ಮೌನ ಭಯಾನಕವಾದದ್ದು. ಅದೃಷ್ಟವಶಾತ್ ಯಾರೋ ಬಂದು ನನ್ನನ್ನು ಉಳಿಸಿದರು" ಎಂದು ತಿಳಿಸಿದ್ದಾರೆ.
ಈ ವಿಡಿಯೋದ ಹಿನ್ನೆಲೆಯಲ್ಲಿ ಕೆಲವರು ನಗುತ್ತಿರುವ ಧ್ವನಿ ಕೇಳಿಸುತ್ತಿದ್ದು, ಇದಕ್ಕೆ ನೆಟ್ಟಿಗರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. "ನಿಮ್ಮ ಪ್ರಾಣಾಪಾಯದ ಸಮಯದಲ್ಲಿ ನಗುವವರು ನಿಮ್ಮ ಸ್ನೇಹಿತರಾಗಿದ್ದರೆ, ತಕ್ಷಣ ಅವರನ್ನು ಬಿಟ್ಟು ದೂರ ಬನ್ನಿ" ಎಂದು ಬಳಕೆದಾರರೊಬ್ಬರು ಕಾಮೆಂಟ್ ಮಾಡಿದ್ದಾರೆ. ಇನ್ನು ಕೆಲವರು ಭಾರತದಲ್ಲಿನ ಸಾಹಸ ಕ್ರೀಡೆಗಳ ಸುರಕ್ಷತಾ ಕ್ರಮಗಳ ಬಗ್ಗೆ ಅಸಮಾಧಾನ ಹೊರಹಾಕಿದ್ದಾರೆ.
ಯಾವುದೇ ವಾಟರ್ ಸ್ಪೋರ್ಟ್ಸ್ ಮಾಡುವ ಮುನ್ನ ಸುರಕ್ಷತಾ ಕ್ರಮಗಳನ್ನು ಸರಿಯಾಗಿ ಪರೀಕ್ಷಿಸಿ. ಆಯೋಜಕರಿಗೆ ಅಗತ್ಯ ಪ್ರಶ್ನೆಗಳನ್ನು ಕೇಳಿ ಮಾಹಿತಿ ಪಡೆಯಿರಿ. ನಿಮ್ಮ ಮನಸ್ಸಿಗೆ ಇದು ಸುರಕ್ಷಿತವಲ್ಲ ಎಂದು ಅನ್ನಿಸಿದರೆ ಅಂತಹ ಸಾಹಸಕ್ಕೆ ಕೈ ಹಾಕಬೇಡಿ. ಎಲ್ಲರಿಗೂ ಎರಡನೇ ಅವಕಾಶ ಸಿಗುವುದಿಲ್ಲ. ಕೆಲವು ನೆನಪುಗಳು ಕೇವಲ ನೆನಪುಗಳಾಗಿ ಉಳಿಯುವುದಿಲ್ಲ, ಅವು ಆಘಾತವಾಗಿ (Trauma) ಕಾಡುತ್ತವೆ" ಎಂದು ಸುಶ್ಮಿತಾ ಪ್ರವಾಸಿಗರಿಗೆ ಎಚ್ಚರಿಕೆ ನೀಡಿದ್ದಾರೆ.
PublicNext
06/05/2026 02:20 pm