ಹೈದರಾಬಾದ್: ತೆಲಂಗಾಣ ರಾಜಧಾನಿ ಹೈದರಾಬಾದ್‌ನ ಸರೂರ್‌ನಗರದಲ್ಲಿ ಕುಡಿದ ಮತ್ತಿನಲ್ಲಿ ಬಿಲ್ ರಿಯಾಯಿತಿಗಾಗಿ ಕಿರಿಕ್ ಮಾಡಿದ ರೌಡಿಗಳ ಗುಂಪೊಂದು, ಹೋಟೆಲ್ ಮಾಲೀಕ ಹಾಗೂ ಸಿಬ್ಬಂದಿಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಬೆಳಕಿಗೆ ಬಂದಿದೆ.
ಮೇ 2ರ ರಾತ್ರಿ ನಾಲ್ವರು ವ್ಯಕ್ತಿಗಳ ತಂಡವೊಂದು ಸ್ಥಳೀಯ ರೆಸ್ಟೋರೆಂಟ್‌ಗೆ ಊಟಕ್ಕೆ ಬಂದಿತ್ತು. ಸುಮಾರು ಎರಡು ಗಂಟೆಗಳ ಕಾಲ ಭರ್ಜರಿ ಊಟ ಮಾಡಿದ ಇವರಿಗೆ 5,900 ರೂಪಾಯಿ ಬಿಲ್ ನೀಡಲಾಗಿತ್ತು. ಆದರೆ, ಬಿಲ್ ಕಂಡ ಕೂಡಲೇ ರಿಯಾಯಿತಿ ಬೇಕೆಂದು ಈ ತಂಡ ತಗಾದೆ ತೆಗೆದಿದೆ. ಹೋಟೆಲ್ ಕ್ಯಾಷಿಯರ್ ನಾಗೇಂದ್ರ ಅವರು 10% ರಿಯಾಯಿತಿ ನೀಡಿದರೂ ಸಹ, "ನಮಗೆ ಇನ್ನೂ ಹೆಚ್ಚಿನ ಡಿಸ್ಕೌಂಟ್ ಬೇಕು, ನಾವು ಡಿಸಿಪಿ ಆಫೀಸ್ ಜೊತೆ ಕನೆಕ್ಷನ್ ಹೊಂದಿದ್ದೇವೆ" ಎಂದು ಧಮಕಿ ಹಾಕಿದ್ದಾರೆ.
ಹೋಟೆಲ್ ಸಿಬ್ಬಂದಿ ಹೆಚ್ಚಿನ ಡಿಸ್ಕೌಂಟ್ ನೀಡಲು ನಿರಾಕರಿಸಿದಾಗ, ಕೋಪಗೊಂಡ ಆರೋಪಿಗಳು ಫೋನ್ ಮಾಡಿ ತಮ್ಮ ಸಹಚರರನ್ನು ಸ್ಥಳಕ್ಕೆ ಕರೆಸಿಕೊಂಡಿದ್ದಾರೆ. ನೋಡನೋಡುತ್ತಿದ್ದಂತೆಯೇ ಸುಮಾರು 20 ರಿಂದ 30 ಜನರ ಗುಂಪು ಕೈಯಲ್ಲಿ ಲಾಠಿ ಮತ್ತು ಚಾಕು ಹಿಡಿದು ಹೋಟೆಲ್‌ಗೆ ನುಗ್ಗಿದೆ. ಅಡ್ಡ ಬಂದ ಸಿಬ್ಬಂದಿ ಹಾಗೂ ಮಾಲೀಕನನ್ನು ಮನಬಂದಂತೆ ಥಳಿಸಿ, ಹೋಟೆಲ್ ಕಿಚನ್ ಹಾಗೂ ಪೀಠೋಪಕರಣಗಳನ್ನು ಧ್ವಂಸಗೊಳಿಸಿದ್ದಾರೆ. ಈ ಇಡೀ ಭೀಕರ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಘಟನೆಯಲ್ಲಿ ಹೋಟೆಲ್ ಮಾಲೀಕ ಹಾಗೂ ಕ್ಯಾಷಿಯರ್ ಸೇರಿದಂತೆ ಹಲವರಿಗೆ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಹೋಟೆಲ್ ಸಿಬ್ಬಂದಿ ನೀಡಿದ ದೂರಿನ ಮೇರೆಗೆ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ. ಎದುಲ ಪ್ರಶಾಂತ್ ರೆಡ್ಡಿ ಮತ್ತು ಎದುಲ ಯಶ್ವಂತ್ ರೆಡ್ಡಿ ಎಂದು ಗುರುತಿಸಲಾಗಿದೆ. ಇಬ್ಬರೂ ಹಳೆ ಕ್ರಿಮಿನಲ್‌ಗಳಾಗಿದ್ದು, ಈಗಾಗಲೇ ಹಲವು ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ ಎಂದು ತಿಳಿದುಬಂದಿದೆ.
ಡಿಸಿಪಿ ಆಫೀಸ್ ಹೆಸರನ್ನು ದುರುಪಯೋಗಪಡಿಸಿಕೊಂಡಿರುವ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸದ್ಯ ಆರೋಪಿಗಳ ಪತ್ತೆಗಾಗಿ ಹೈದರಾಬಾದ್ ಪೊಲೀಸರು ವಿಶೇಷ ತಂಡಗಳನ್ನು ರಚಿಸಿದ್ದು, ತಲೆಮರೆಸಿಕೊಂಡಿರುವ ರೌಡಿಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.
PublicNext
06/05/2026 04:32 pm