ತರೀಕೆರೆ: ಅಂತರಘಟ್ಟಮ್ಮ ಜಾತ್ರೆಯಲ್ಲಿ ಭರ್ಜರಿ ಕುರಿ ವ್ಯಾಪಾರ - ಕುರಿಗಾಹಿಗಳ ಮುಖದಲ್ಲಿ ಮಂದಹಾಸ
ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ಅಂತರಗಟ್ಟೆ ಗ್ರಾಮದಲ್ಲಿ ನೆಲೆಸಿರುವ ಪ್ರಸಿದ್ಧ ಅಂತರಗಟ್ಟೆ (ದುರ್ಗಾಂಬಾ) ದೇವಿ ಜಾತ್ರಾ ಮಹೋತ್ಸವವು ಅತ್ಯಂತ ವೈಭವದಿಂದ ಜರುಗುತ್ತಿದೆ.
ರಾಜ್ಯದ ವಿವಿಧೆಡೆಯಿಂದ ಸಹಸ್ರಾರು ಭಕ್ತರು ಈ ಜಾತ್ರೆಗೆ ಆಗಮಿಸುತ್ತಿದ್ದು, ದೇವಿಗೆ ಹರಕೆ ರೂಪದಲ್ಲಿ ಕುರಿ-ಕೋಳಿಗಳನ್ನು ಬಲಿ ನೀಡುವುದು ಇಲ್ಲಿನ ವಿಶೇಷ ಸಂಪ್ರದಾಯವಾಗಿದೆ.
ಈ ಹಿನ್ನೆಲೆಯಲ್ಲಿ ಅಂತರಗಟ್ಟೆ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ಭರ್ಜರಿ ಕುರಿ ವ್ಯಾಪಾರ ನಡೆಯುತ್ತಿದೆ. ಹರಕೆ ತೀರಿಸಲು ಭಕ್ತರು ಮುಗಿಬೀಳುತ್ತಿರುವುದರಿಂದ ಕುರಿಗಳಿಗೆ ಭಾರೀ ಬೇಡಿಕೆ ಉಂಟಾಗಿದ್ದು, ವ್ಯಾಪಾರಸ್ಥರು ಕುರಿಗಳನ್ನು ಅಂತರಗಟ್ಟೆ ಮೈದಾನ ಹಾಗೂ ರಸ್ತೆ ಬದಿಗಳಲ್ಲಿ ಮಾರಾಟಕ್ಕಿಟ್ಟಿದ್ದಾರೆ.
ಗುಣಮಟ್ಟ ಮತ್ತು ಗಾತ್ರಕ್ಕೆ ಅನುಗುಣವಾಗಿ ಕುರಿಗಳು ಉತ್ತಮ ಬೆಲೆಗೆ ಮಾರಾಟವಾಗುತ್ತಿದ್ದು, ಕುರಿಗಾಹಿಗಳು ಹಾಗೂ ಸ್ಥಳೀಯ ವ್ಯಾಪಾರಿಗಳಲ್ಲಿ ಸಂತಸ ಮೂಡಿಸಿದೆ. ದೂರದ ಊರುಗಳಿಂದ ಬರುವ ಭಕ್ತರು ತಮಗೆ ಬೇಕಾದ ಕುರಿಗಳನ್ನು ಸ್ಥಳದಲ್ಲೇ ಖರೀದಿಸುತ್ತಿದ್ದು, ಜಾತ್ರಾ ಮೈದಾನದಲ್ಲಿ ಜನಜಂಗುಳಿ ಮತ್ತು ವ್ಯಾಪಾರದ ಅಬ್ಬರ ಜೋರಾಗಿದೆ. ಹೊಸದುರ್ಗ, ಚೌಳಹಿರಿಯೂರು, ಶಿಕಾರಿಪುರ, ಶಿವಮೊಗ್ಗ ಉಳಿದಂತೆ ತಾಲೂಕಿನ ಗ್ರಾಮೀಣ ಭಾಗಗಳಿಂದ ಕುರಿ ವ್ಯಾಪಾರ ಮಾಡಲು ತರಲಾಗಿದ್ದು ವಾರ ಪೂರ್ತಿ ಆಚರಿಸುವ ಅಂತರಗಟ್ಟಮ್ಮ ಜಾತ್ರೆಯನ್ನು ತರೀಕೆರೆ ತಾಲೂಕಿನ ಜನತೆ ಅತ್ಯಂತ ಸಂಭ್ರಮದಿಂದ ಆಚರಿಸುತ್ತಾರೆ.
PublicNext
28/01/2026 04:40 pm
LOADING...