ನಂಜನಗೂಡು: ರಸ್ತೆ ಸುರಕ್ಷತೆಯ ಮಹತ್ವದ ಕುರಿತು ಜನರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ನಗರದಲ್ಲಿ ಆಯೋಜಿಸಲಾಗಿದ್ದ ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸಾಚರಣೆ ಜಾಥಾಕ್ಕೆ ಮೈಸೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಮೈಸೂರು ಜಿಲ್ಲೆಯಲ್ಲಿ ಕಳೆದ ಒಂದು ತಿಂಗಳಿಂದ ರಸ್ತೆ ಸುರಕ್ಷತೆ ಕುರಿತು ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು, ನಂಜನಗೂಡಿನಲ್ಲಿ ಜಾಥಾ ಹಾಗೂ ರಸ್ತೆ ಸಪ್ತಾಹವನ್ನು ಆಚರಿಸಲಾಗುತ್ತಿದೆ ಎಂದು ತಿಳಿಸಿದರು. ಕಾಲೇಜು ವಿದ್ಯಾರ್ಥಿಗಳ ಮೂಲಕ ಜನರಿಗೆ ಅರಿವು ಮೂಡಿಸುವ ಈ ಕಾರ್ಯಕ್ರಮದಲ್ಲಿ, ಹೆಲ್ಮೆಟ್ ಧರಿಸದೆ ಪ್ರಯಾಣಿಸುವುದು, ವಾಹನ ಚಲಾಯಿಸುವಾಗ ಮೊಬೈಲ್ ಬಳಕೆ ಮಾಡುವುದು ಸೇರಿದಂತೆ ಹಲವು ಸಂಚಾರಿ ನಿಯಮಗಳ ಉಲ್ಲಂಘನೆ ಕಂಡುಬರುತ್ತಿದೆ ಎಂದು ಅವರು ವಿಷಾದ ವ್ಯಕ್ತಪಡಿಸಿದರು. ಸಾಮಾಜಿಕ ಜಾಲತಾಣಗಳು ಮತ್ತು ಶಾಲಾ ಕಾಲೇಜುಗಳ ಮೂಲಕ ಈ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯ ನಡೆಯುತ್ತಿದ್ದು, ಮುಂದಿನ ದಿನಗಳಲ್ಲಿ ಎಲ್ಲ ಶಾಲಾ ಕಾಲೇಜುಗಳಲ್ಲಿ ಇಂತಹ ಕಾರ್ಯಕ್ರಮಗಳನ್ನು ರೂಪಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದರು. ಪ್ರತಿದಿನ ಸಾಕಷ್ಟು ರಸ್ತೆ ಅಪಘಾತಗಳಲ್ಲಿ ಜನರು ಸಾವನ್ನಪ್ಪುತ್ತಿದ್ದು, ಇದನ್ನು ತಡೆಗಟ್ಟಲು ಜಾಗೃತಿ ಮೂಡಿಸುವುದು ಅತ್ಯಗತ್ಯ. ಪೊಲೀಸರಿಗೋಸ್ಕರ ಹೆಲ್ಮೆಟ್ ಧರಿಸುವುದಲ್ಲ, ತಮ್ಮ ಜೀವವನ್ನು ರಕ್ಷಿಸಿಕೊಳ್ಳಲು ಹೆಲ್ಮೆಟ್ ಧರಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದು ಬಾಲದಂಡಿ ಸ್ಪಷ್ಟಪಡಿಸಿದರು.
ನಂತರ ಸರ್ಕಾರಿ ನಾಗಮ್ಮ ಶಾಲೆಯಿಂದ ಜೂನಿಯರ್ ಕಾಲೇಜಿನ ಮೈದಾನದವರೆಗೆ ವಿದ್ಯಾರ್ಥಿಗಳಿಂದ ಬೃಹತ್ ಜಾಥಾ ನಡೆಸಲಾಯಿತು. ಈ ಜಾಥಾದ ಮೂಲಕ ಜನರಿಗೆ ಅರಿವು ಮೂಡಿಸಿ, ವಾಹನ ಸವಾರರಿಗೆ ಕಡ್ಡಾಯವಾಗಿ ಹೆಲ್ಮೆಟ್ ಧರಿಸಿ ಪ್ರಯಾಣಿಸುವಂತೆ ಮನವರಿಕೆ ಮಾಡಿಕೊಡಲಾಯಿತು. ಇದೇ ಸಂದರ್ಭದಲ್ಲಿ, ನಂಜನಗೂಡಿನ ದೇವಿರಮ್ಮ ಹಳ್ಳಿಯಲ್ಲಿರುವ ಜೆಎಸ್‌ಎಸ್ ಕಾಲೇಜಿನಲ್ಲಿ ನಡೆದ ವೇದಿಕೆ ಕಾರ್ಯಕ್ರಮವನ್ನು ಎಎಸ್‌ಪಿ ಮಲ್ಲಿಕ್ ಶ್ರೀ ಶಿವರಾತ್ರೀಶ್ವರರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ಅಪಘಾತ ತಡೆಗಟ್ಟಲು ಕ್ರಮಗಳು ಮತ್ತು ಅಂಕಿಅಂಶಗಳು
ಜಿಲ್ಲೆಯಾದ್ಯಂತ ಈಗಾಗಲೇ ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿದ್ದು, ಸಂಚಾರಿ ನಿಯಮಗಳನ್ನು ಉಲ್ಲಂಘಿಸಿದ ವಾಹನ ಸವಾರರಿಗೆ ಇದುವರೆಗೆ 30 ಲಕ್ಷ ರೂಪಾಯಿ ದಂಡ ವಿಧಿಸಲಾಗಿದೆ ಎಂದು ಎಎಸ್‌ಪಿ ಮಲ್ಲಿಕ್ ತಿಳಿಸಿದರು. ಅಪಘಾತ ಪ್ರಕರಣಗಳನ್ನು ತಡೆಗಟ್ಟಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತಿದೆ. ಸಿಸಿ ಕ್ಯಾಮೆರಾ ಅಥವಾ ಪೊಲೀಸರಿಗಾಗಿ ಹೆಲ್ಮೆಟ್ ಧರಿಸುವುದಲ್ಲ, ನಮ್ಮ ಜೀವವನ್ನು ಕಾಪಾಡಿಕೊಳ್ಳಲು ಹೆಲ್ಮೆಟ್ ಧರಿಸುವುದು ನಮ್ಮೆಲ್ಲರ ಕರ್ತವ್ಯ ಎಂದು ಅವರು ಪುನರುಚ್ಚರಿಸಿದರು. ಜಿಲ್ಲೆಯಲ್ಲಿ 400 ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿದ್ದು, ಯಾವುದೇ ಜೀವಕ್ಕೂ ಹಾನಿಯಾಗದಂತೆ ಅಮೂಲ್ಯ ಜೀವಗಳನ್ನು ರಕ್ಷಿಸುವುದು ನಮ್ಮ ಆದ್ಯತೆಯಾಗಿದೆ ಎಂದರು. ಇತ್ತೀಚಿನ ದಿನಗಳಲ್ಲಿ ಅಪಘಾತಗಳಲ್ಲಿ ಸಾವಿನ ಪ್ರಮಾಣ ಹೆಚ್ಚಾಗುತ್ತಿದ್ದು, ಪೋಷಕರು ತಮ್ಮ ಮಕ್ಕಳಿಗೆ ಬೈಕ್ ನೀಡುವಾಗ ಜವಾಬ್ದಾರಿಯನ್ನು ಅರಿತುಕೊಳ್ಳಬೇಕು ಎಂದು ಸಲಹೆ ನೀಡಿದರು. ಪ್ರತಿಯೊಬ್ಬರೂ ಸಂಚಾರಿ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಅಪಘಾತಗಳಿಂದ ವಿದ್ಯಾರ್ಥಿಗಳ ಜೀವನ ಹಾಳಾಗುವ ಸಾಧ್ಯತೆಗಳಿರುವುದರಿಂದ, ಅಮೂಲ್ಯ ಜೀವಗಳನ್ನು ಉಳಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಅವರು ಒತ್ತಿ ಹೇಳಿದರು. ನಂಜನಗೂಡಿನಲ್ಲಿ ವರ್ಷಕ್ಕೆ 150 ರಿಂದ 200 ಅಪಘಾತ ಪ್ರಕರಣಗಳು ನಡೆಯುತ್ತಿದ್ದು, ಸರಿಸುಮಾರು 100 ಮಂದಿ ಸಾವನ್ನಪ್ಪುತ್ತಿದ್ದಾರೆ. ಮೈಸೂರು ಜಿಲ್ಲೆಯಲ್ಲಿ ಸಾವನ್ನಪ್ಪುತ್ತಿರುವವರ ಸಂಖ್ಯೆ 1000ಕ್ಕೆ ಏರಿಕೆಯಾಗಿದೆ ಎಂಬ ಆತಂಕಕಾರಿ ಅಂಕಿಅಂಶಗಳನ್ನು ಅವರು ಬಹಿರಂಗಪಡಿಸಿದರು. ರಸ್ತೆ ದಾಟುವಾಗ ಎಚ್ಚರಿಕೆ ವಹಿಸಬೇಕು ಮತ್ತು ವಾಹನ ಸವಾರರು ಕಡ್ಡಾಯವಾಗಿ ಡಿಎಲ್, ಇನ್ಸೂರೆನ್ಸ್ ಹಾಗೂ ಅಗತ್ಯ ದಾಖಲಾತಿಗಳನ್ನು ಹೊಂದಿರಬೇಕು ಎಂದು ಅವರು ಕಟ್ಟುನಿಟ್ಟಾಗಿ ಸೂಚಿಸಿದರು.
ಈ ಕಾರ್ಯಕ್ರಮದ ಅಂಗವಾಗಿ ನಂಜನಗೂಡಿನ ಪತ್ರಕರ್ತರಿಗೆ ಪೊಲೀಸ್ ಇಲಾಖೆಯಿಂದ ಹೆಲ್ಮೆಟ್‌ಗಳನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಡಿವೈಎಸ್‌ಪಿ ರಘು, ಪಟ್ಟಣ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಸಿ.ಎಂ. ರವೀಂದ್ರ, ಜೆಎಸ್‌ಎಸ್ ಕಾಲೇಜಿನ ಪ್ರಾಂಶುಪಾಲರಾದ ಹೊನ್ನೇಗೌಡ, ಶಿವಕುಮಾರ್, ಸಂಚಾರಿ ಪೊಲೀಸ್ ಠಾಣೆ ಪಿಎಸ್‌ಐ ಕೃಷ್ಣಕಾಂತ ಕೋಳಿ, ಹುಲ್ಲಹಳ್ಳಿ ಪೊಲೀಸ್ ಠಾಣೆ ಪಿಎಸ್‌ಐ ಚೇತನ್ ಕುಮಾರ್, ಎಸ್.ಬಿ. ತಿಮ್ಮಯ್ಯ ಸೇರಿದಂತೆ ಪೊಲೀಸ್ ಇಲಾಖೆಯ ಸಿಬ್ಬಂದಿಗಳು ಹಾಗೂ ಶಾಲಾ ಕಾಲೇಜಿನ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
PublicNext
30/01/2026 10:37 pm