ಹೊಸಪೇಟೆ: ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಮಲಪನಗುಡಿ ತಾಂಡದಲ್ಲಿ ಆಕಸ್ಮಿಕವಾಗಿ ಬೆಂಕಿ ಅವಘಡ ಸಂಭವಿಸಿ, ಗುಡಿಸಲೊಂದು ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ.
ಬೆಂಕಿ ಕಾಣಿಸಿಕೊಂಡ ವೇಳೆ ಅದೃಷ್ಟವಶಾತ್ ಗುಡಿಸಲಲ್ಲಿ ಯಾರೂ ಇಲ್ಲದ ಕಾರಣ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಆದರೆ ಟಿವಿ, ಮಂಚ, ಕಪಾಟಿನಲ್ಲಿದ್ದ ಬಟ್ಟೆ, ಮಕ್ಕಳ ಬೆಳ್ಳಿ ಸಾಮಾನು, ಚೈನ್ 20ಗ್ರಾಂ ಬಂಗಾರ ಮತ್ತು ಮಕ್ಕಳ ಪುಸ್ತಕಗಳು, ದ್ವಿಚಕ್ರ ವಾಹನ ಸೇರಿದಂತೆ ಮನೆಯಲ್ಲಿದ್ದ ಎಲ್ಲಾ ವಸ್ತುಗಳು ಬೆಂಕಿಗೆ ಆಹುತಿಯಾಗಿವೆ.
ನಾವು ಯಾರೂ ಮನೆಯಲ್ಲಿ ಇಲ್ಲದಿದ್ದಾಗ ಬೆಂಕಿ ಹೊತ್ತಿಕೊಂಡಿದೆ. ಅಕ್ಕಪಕ್ಕದ ಮನೆಯವರು ಬೆಂಕಿ ಹೊತ್ತಿದೆ ಅಂತ ತಿಳಿಸಿದ್ರು. ಕೆಲಸಕ್ಕೆ ಹೋಗಿದ್ದೆ. ವಾಪಸ್ ಬರುವಷ್ಟರಲ್ಲಿ ಮನೆಯಲ್ಲಿದ್ದ ಎಲ್ಲಾ ಸಾಮಾನು ಸುಟ್ಟು ಕರಕಲಾಗಿವೆ ಅಂತ ಮನೆ ಮಾಲಕಿ ಲಕ್ಷ್ಮಣ ನಾಯ್ಕ್ ಪತ್ನಿ ತುಳಸಿಬಾಯಿ ಹೇಳಿದ್ರು.
ಲಕ್ಷ್ಮಣ ನಾಯ್ಕ್–ತುಳಸಿಬಾಯಿ ದಂಪತಿಗೆ ನಾಲ್ಕು ಹೆಣ್ಣು ಮಕ್ಕಳಿದ್ದು, ಮನೆ ಸಂಪೂರ್ಣ ನಾಶವಾದ ಹಿನ್ನೆಲೆಯಲ್ಲಿ ಕುಟುಂಬ ತೀವ್ರ ಸಂಕಷ್ಟಕ್ಕೆ ಒಳಗಾಗಿದೆ. ಕಣ್ಣೀರಿಡುತ್ತಾ ನೆರವಿಗಾಗಿ ಕೈಚಾಚಿದ್ದಾರೆ.
ಘಟನಾ ಸ್ಥಳಕ್ಕೆ ಸ್ಥಳೀಯರು, ಗ್ರಾಮ ಪಂಚಾಯಿತಿ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ವಿಜಯನಗರ ಜಿಲ್ಲೆಯ ಶಾಸಕ ಗವಿಯಪ್ಪ ಅವರಿಗೆ ಮಾಹಿತಿ ನೀಡಿದ್ದಾರೆ. ಸಂತ್ರಸ್ತ ಕುಟುಂಬಕ್ಕೆ ತಕ್ಷಣ ಸೂಕ್ತ ಪರಿಹಾರ, ನೆರವು ಒದಗಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸ್ಥಳೀಯರು ಮನವಿ ಮಾಡಿದ್ದಾರೆ.
PublicNext
31/01/2026 03:47 pm
LOADING...