ಚಾಮರಾಜನಗರ: ಕಲ್ಯಾಣ ಮಂಟಪಕ್ಕೆ ತೆರಳುತ್ತಿದ್ದ ವರನ ಮೇಲೆ ನಡೆದ ಚಾಕು ಇರಿತ ಪ್ರಕರಣಕ್ಕೆ ಇದೀಗ ಅಚ್ಚರಿಯ ತಿರುವು ಸಿಕ್ಕಿದೆ. ಈ ಇಡೀ ನಾಟಕದ ಪ್ರಮುಖ ಸೂತ್ರಧಾರಿಯೇ ಸ್ವತಃ ಮಧುಮಗಳು ಎಂಬುದು ಪೊಲೀಸರ ತನಿಖೆಯಲ್ಲಿ ಬಯಲಾಗಿದೆ.
ಪ್ರಮುಖ ಆರೋಪಿ ಮಧುಮಗಳು
ವರ ರವೀಶ್ ಜೊತೆ ವಿವಾಹ ನಿಶ್ಚಯವಾಗಿದ್ದ ವಧು ನಯನಾ, ಈ ಪ್ರಕರಣದ ಪ್ರಮುಖ ಆರೋಪಿಯಾಗಿದ್ದಾಳೆ. ಈಕೆ ಮೊದಲೇ ದರ್ಶನ್ ಎಂಬ ಯುವಕನನ್ನು ಪ್ರೀತಿಸುತ್ತಿದ್ದಳು ಎಂಬುದು ತನಿಖೆಯಿಂದ ಬಯಲಾಗಿದೆ. ತನ್ನ ಪ್ರಿಯಕರನೊಂದಿಗೆ ಸೇರಿ ಇಂತಹ ಹೇಯ ಕೃತ್ಯಕ್ಕೆ ನಯನಾ ಮುಂದಾಗಿದ್ದಳು. ಘಟನೆ ಬಳಿಕ ಆಸ್ಪತ್ರೆಗೆ ತೆರಳಿ ಏನೂ ಅರಿಯದವಳಂತೆ ನಾಟಕವಾಡಿದ್ದ ಚಾಲಾಕಿ ಯುವತಿಯ ಒಳಮರ್ಮ ಕೊಳ್ಳೇಗಾಲ ಪೊಲೀಸರ ತನಿಖೆಯಲ್ಲಿ ಬಯಲಾಗಿದೆ.
ಮದುವೆ ನಿಲ್ಲಿಸಲು ಸಂಚು
ಚಾಕು ಇರಿತದ ಆರೋಪಿ ದರ್ಶನ್ ತಮಟೆ ಹೊಡೆಯುವ ಕೆಲಸ ಮಾಡುತ್ತಿದ್ದ. ಪ್ರಿಯಕರನ ಕೆಲಸದ ಬಗ್ಗೆ ಮನೆಯವರಿಗೆ ತಿಳಿಸಲು ನಯನಾ ಹಿಂದೇಟು ಹಾಕಿದ್ದಳು. ರವೀಶ್ ಜೊತೆ ನಿಶ್ಚಯವಾಗಿದ್ದ ಮದುವೆಯನ್ನು ನಿಲ್ಲಿಸುವಂತೆ ದರ್ಶನ್‌ಗೆ ನಯನಾ ಉಪಾಯ ಹೇಳಿದ್ದಳು. ಅದರಂತೆ, ಜನವರಿ 27 ರಂದು ಕಲ್ಯಾಣ ಮಂಟಪಕ್ಕೆ ತೆರಳುತ್ತಿದ್ದ ರವೀಶ್ ಕಾರನ್ನು ಅಡ್ಡಗಟ್ಟಿ, ಚಾಕು ಇರಿದು ದರ್ಶನ್ ತನ್ನ ಸ್ನೇಹಿತರೊಂದಿಗೆ ಪರಾರಿಯಾಗಿದ್ದ.
ವಧುವಿನ ನಾಟಕ ಬಯಲು
ನಂತರ ಆಸ್ಪತ್ರೆಗೆ ದಾಖಲಾಗಿದ್ದ ರವೀಶ್ ಬಳಿ ತೆರಳಿದ ನಯನಾ, "ನನ್ನ ಕೈ ಬಿಡಬೇಡ, ನನ್ನನ್ನೇ ಮದುವೆಯಾಗು" ಎಂದು ಬೇಡುವ ನಾಟಕವಾಡಿದ್ದಳು. ನಯನಾಳ ಈ ನಡವಳಿಕೆಯ ಬಗ್ಗೆ ಅನುಮಾನಗೊಂಡ ರವೀಶ್, ಆಕೆಯನ್ನು ಮದುವೆಯಾಗಲು ನಿರಾಕರಿಸಿದ್ದ. ಇಷ್ಟೆಲ್ಲಾ ಆದ ಮೇಲೆ ಪೊಲೀಸರ ತನಿಖೆಯಲ್ಲಿ ನಯನಾಳ ನೌಟಂಕಿ ಆಟ ಸಂಪೂರ್ಣವಾಗಿ ಬಯಲಾಗಿದೆ.
ಆರೋಪಿಗಳ ಬಂಧನ
ಸದ್ಯ, ಪ್ರಿಯಕರ ದರ್ಶನ್, ಆತನ ಸ್ನೇಹಿತ ಮತ್ತು ನಯನಾಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಶಿವಕುಮಾರ್ ಪಬ್ಲಿಕ್ ನೆಕ್ಸ್ಟ್ ಗುಂಡ್ಲುಪೇಟೆ
PublicNext
02/02/2026 11:29 am