ಬೆಂಗಳೂರು: ವಾಕ್ ಮಾಡೋವಾಗ ರಸ್ತೆಯಲ್ಲಿ ಹೋಗುವಾಗ ಚಿನ್ನದ ಸರ ಬಗ್ಗೆ ಜಾಗ್ರತೆ ಅಂತ ಪೊಲೀಸ್ರು ಹೇಳ್ತಾನೆ ಇರ್ತಾರೆ, ಒಬ್ಬೊಬ್ಬರೇ ವಾಕ್ ಮಾಡುವಾಗ ಚಿನ್ನದ ಸರವನ್ನ ಮನೆಯಲ್ಲಿ ಬಿಚ್ಚಿಟ್ಟು ಹೋಗಿ ಅಂತ ಹೇಳಿದ್ರು ಮಹಿಳೆಯರು ಕೇಳಲ್ಲ. ಸದ್ಯ ಸರಗಳ್ಳನ ಕೃತ್ಯಕ್ಕೆ ವಾಕ್ ಮಾಡ್ತಿದ್ದ ಮಹಿಳೆಯೊಬ್ಬರು 5 ಲಕ್ಷ ಮೌಲ್ಯದ ತಮ್ಮ ಚಿನ್ನದ ಸರ ಕಳೆದುಕೊಂಡಿದ್ದಾರೆ.
ಸರಗಳ್ಳತನ ಪ್ರಕರಣಗಳು ಹೆಚ್ಚುತ್ತಿದ್ದು, ಇದೀಗ ಕಳ್ಳರು ತಮ್ಮ ಕಾರ್ಯಾಚರಣೆಯ ವಿಧಾನವನ್ನು ಬದಲಾಯಿಸಿದ್ದಾರೆ. ಈ ಹಿಂದೆ ರಸ್ತೆಗಳಲ್ಲಿ ಬೈಕ್‌ನಲ್ಲಿ ಬಂದು ಸರಗಳ್ಳತನ ಮಾಡುತ್ತಿದ್ದ ಕಳ್ಳರು, ಇದೀಗ ಪಾರ್ಕ್‌ಗಳನ್ನೂ ಬಿಡುತ್ತಿಲ್ಲ. ಮಾದನಾಯಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಮಾಚೋಹಳ್ಳಿಯಲ್ಲಿ ನಿನ್ನೆ ನಡೆದ ಘಟನೆಯೊಂದು ಇದಕ್ಕೆ ಸಾಕ್ಷಿಯಾಗಿದೆ.
ಮಾಚೋಹಳ್ಳಿಯ ವೃಕ್ಷೋದ್ಯಾನವನದಲ್ಲಿ ವಾಕಿಂಗ್ ಮಾಡುತ್ತಿದ್ದ 54 ವರ್ಷದ ನಿರ್ಮಲಾ ಎಂಬ ಮಹಿಳೆಗೆ ಚಾಕು ತೋರಿಸಿ, ಕುತ್ತಿಗೆಗೆ ಕೈ ಹಾಕಿ ಸುಮಾರು 5 ಲಕ್ಷ ಮೌಲ್ಯದ 36 ಗ್ರಾಂ ಚಿನ್ನದ ಸರ ಕಸಿದು ದುಷ್ಕರ್ಮಿ ಪರಾರಿಯಾಗಿದ್ದಾನೆ.
ಸಂಜೆ 5:30ರ ಸುಮಾರಿಗೆ ವೃಕ್ಷೋದ್ಯಾನದಲ್ಲಿ ವಾಕಿಂಗ್ ಮಾಡುತ್ತಿದ್ದ ನಿರ್ಮಲಾ ಒಬ್ಬರೇ ವಾಕ್ ಮಾಡೋದನ್ನ ಗಮನಿಸಿದ ಆರೋಪಿ ಆಕೆಯನ್ನು ಹಿಂಬಾಲಿಸಿದ್ದಾನೆ. ಸುತ್ತಮುತ್ತ ಯಾರೂ ಇಲ್ಲದ್ದನ್ನು ಖಚಿತಪಡಿಸಿಕೊಂಡ ನಂತರ, ಆತ ಮಹಿಳೆಗೆ ಚಾಕು ತೋರಿಸಿ ಬೆದರಿಸಿ, ಮುಖಕ್ಕೆ ಪಂಚ್ ಕೊಟ್ಟು ಕೆಳಗೆ ಬಿಳಿಸಿದ್ದಾನೆ. ಆಕೆ ಕೆಳಗೆ ಬೀಳ್ತಿದ್ದಂತೆ ಆಕೆಯ ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನು ಬಲವಂತವಾಗಿ ಕಿತ್ತುಕೊಂಡು ಪರಾರಿಯಾಗಿದ್ದಾನೆ. ಈ ಘಟನೆಯಲ್ಲಿ ಮಹಿಳೆಯ ಕುತ್ತಿಗೆಗೆ ಸಣ್ಣಪುಟ್ಟ ಗಾಯಗಳಾಗಿವೆ.
ಘಟನೆ ನಡೆದ ತಕ್ಷಣ, ಮಾದನಾಯಕನಹಳ್ಳಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸಾರ್ವಜನಿಕರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು, ಮುಂದಿನ ಆದೇಶದವರೆಗೆ ಅರಣ್ಯ ಇಲಾಖೆಯ ಸುಪರ್ದಿಯಲ್ಲಿರುವ ವೃಕ್ಷೋದ್ಯಾನವನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ. ಈ ಘಟನೆ ಸಾರ್ವಜನಿಕರಲ್ಲಿ ಆತಂಕ ಮೂಡಿಸಿದ್ದು, ಪೊಲೀಸರು ಆರೋಪಿಯ ಪತ್ತೆಗೆ ಶೋಧ ಕಾರ್ಯ ನಡೆಸುತ್ತಿದ್ದಾರೆ.
PublicNext
03/02/2026 12:08 pm