ಬೆಂಗಳೂರು: ಕೆ.ಆರ್. ಪುರಂ ವ್ಯಾಪ್ತಿಯಲ್ಲಿ ಹುಡುಗಿ ವಿಚಾರಕ್ಕೆ ಸಂಬಂಧಿಸಿದಂತೆ ಯುವಕರ ನಡುವೆ ನಡೆದ ಗಲಾಟೆಯನ್ನು ತಡೆಯಲು ಹೋದ ಆಟೋ ಚಾಲಕನೊಬ್ಬನಿಗೆ ಮಾರಕಾಸ್ತ್ರಗಳಿಂದ ಮಾರಣಾಂತಿಕ ಹಲ್ಲೆ ನಡೆಸಲಾಗಿದೆ. ಈ ಘಟನೆಯು ನಗರದಲ್ಲಿ ಪುಡಿ ರೌಡಿಗಳ ಅಟ್ಟಹಾಸ ನಿರಂತರವಾಗಿ ಮುಂದುವರಿದಿರುವುದಕ್ಕೆ ಮತ್ತೊಂದು ನಿದರ್ಶನವಾಗಿದೆ.
ಫೆಬ್ರವರಿ 1ರ ರಾತ್ರಿ ಸುಮಾರು 8:15ರ ಸುಮಾರಿಗೆ ಕೆ.ಆರ್. ಪುರಂನ ದೇವಸಂದ್ರ ಸಮೀಪದ ಮದೀನಾ ಮಸೀದಿ ರಸ್ತೆಯಲ್ಲಿ ಈ ಘಟನೆ ನಡೆದಿದೆ. ನಮಾಜ್ ಮುಗಿಸಿಕೊಂಡು ತನ್ನ ಗೆಳೆಯ ಶೋಯಬ್ ಜೊತೆ ಮನೆಗೆ ತೆರಳುತ್ತಿದ್ದ ಆಟೋ ಚಾಲಕ ರೋಷನ್, ಮಾಮು ಮತ್ತು ಮತ್ತೊಬ್ಬ ರೋಷನ್ ಎಂಬ ಇಬ್ಬರ ನಡುವೆ ಹುಡುಗಿ ವಿಚಾರಕ್ಕೆ ನಡೆಯುತ್ತಿದ್ದ ಜಗಳವನ್ನು ತಡೆಯಲು ಮುಂದಾಗಿದ್ದಾರೆ.
ಹುಡುಗಿ ವಿಚಾರಕ್ಕೆ ಯುವಕರ ನಡುವೆ ನಡೆದ ಗಲಾಟೆಯನ್ನು ತಡೆಯಲು ಹೋದ ಆಟೋ ಚಾಲಕ ರೋಷನ್ ಮೇಲೆ ಏಕಾಏಕಿ ಹಲ್ಲೆ ನಡೆಸಿದ ಪುಂಡರ ಗುಂಪು, ಆತನ ಕುತ್ತಿಗೆಗೆ ಮಾರಕಾಸ್ತ್ರದಿಂದ ಹಲ್ಲೆ ನಡೆಸಿ ಗಂಭೀರವಾಗಿ ಗಾಯಗೊಳಿಸಿದೆ. ವಾಸಿಂ, ಯಾಸಿಫ್, ಖಲೀಮ್ ಹಾಗೂ ಇನ್ನೊಬ್ಬ ಅಪರಿಚಿತ ವ್ಯಕ್ತಿ ಸೇರಿ 10ರಿಂದ 15 ಜನರಿದ್ದ ಗುಂಪು ನಡುರಸ್ತೆಯಲ್ಲೇ ಈ ಕೃತ್ಯ ಎಸಗಿದೆ ಎಂದು ತಿಳಿದುಬಂದಿದೆ. ಗಂಭೀರವಾಗಿ ಗಾಯಗೊಂಡಿರುವ ಆಟೋ ಚಾಲಕ ರೋಷನ್ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಮುಂದುವರಿದಿದೆ.
ನೇಪಾಳಿ ಯುವತಿಯೊಬ್ಬಳನ್ನು ಪ್ರೀತಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಮಾಮು ಮತ್ತು ಆಟೋ ಚಾಲಕ ರೋಷನ್ ಎಂಬ ಇಬ್ಬರ ನಡುವೆ ಜಗಳ ನಡೆದಿತ್ತು ಎಂಬ ಮಾಹಿತಿ ಲಭ್ಯವಾಗಿದೆ. ಆದರೆ, ಆಟೋ ಚಾಲಕ ರೋಷನ್ ಕೂಡ ಈ ಗಲಾಟೆಯಲ್ಲಿ ನೇರವಾಗಿ ಭಾಗಿಯಾಗಿದ್ದನೇ ಅಥವಾ ಕೇವಲ ಜಗಳ ತಡೆಯಲು ಹೋಗಿ ಹಲ್ಲೆಗೆ ಒಳಗಾಗಿದ್ದನೇ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಕೆ.ಆರ್. ಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಘಟನೆಗೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿ ಕಲೆಹಾಕುತ್ತಿದ್ದಾರೆ.
PublicNext
03/02/2026 12:22 pm