ಸೂರತ್ (ಗುಜರಾತ್): ಕಟ್ಟಡ ನಿರ್ಮಾಣ ಸ್ಥಳವೊಂದರಲ್ಲಿ ಟ್ರಾಕ್ಟರ್ ಚಾಲಕನ ನಿರ್ಲಕ್ಷ್ಯ ಮತ್ತು ಮದ್ಯಪಾನದ ಅಮಲು ಅಮಾಯಕ ಮಹಿಳೆಯೊಬ್ಬರಿಗೆ ಗಂಭೀರ ಗಾಯಗಳನ್ನು ಮಾಡಿದೆ. ಹೌದು ಸೂರತ್‌ನ ಅಲ್ಥಾನ್ ಭತಾರ್ ಪ್ರದೇಶದಲ್ಲಿ ನಡೆದ ಈ ಘಟನೆಯಲ್ಲಿ, ಟ್ರಾಕ್ಟರ್ ಅಡಿಯಲ್ಲಿ ಸಿಲುಕಿ ಗಂಭೀರವಾಗಿ ಗಾಯಗೊಂಡ ಮಹಿಳೆ ಪ್ರಾಣಾಪಾಯದಿಂದ ಪಾರಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ನಿರ್ಮಾಣ ಹಂತದಲ್ಲಿರುವ ಸೈಟ್ ಬಳಿ ಮಹಿಳೆಯೊಬ್ಬರು ಮೊಬೈಲ್‌ನಲ್ಲಿ ಮಾತನಾಡುತ್ತಾ ರಸ್ತೆಯ ಬದಿಯಲ್ಲಿ ನಿಂತಿದ್ದರು. ಈ ವೇಳೆ, ಮಣ್ಣು ತುಂಬಿದ್ದ ಟ್ರಾಕ್ಟರ್‌ನ ಚಾಲಕ ಯಾವುದೇ ಮುನ್ನೆಚ್ಚರಿಕೆ ನೀಡದೆ ಏಕಾಏಕಿ ವಾಹನವನ್ನು ರಿವರ್ಸ್ ತೆಗೆದಿದ್ದಾನೆ. ಮಹಿಳೆ ಹಿಂದೆ ನಿಂತಿರುವುದು ಆತನ ಗಮನಕ್ಕೆ ಬಾರದೆ, ಟ್ರಾಕ್ಟರ್ ಹಿಂಬದಿಯಿಂದ ಬಂದು ಮಹಿಳೆಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಮಹಿಳೆ ಟ್ರಾಕ್ಟರ್‌ನ ಚಕ್ರಗಳ ಅಡಿಯಲ್ಲಿ ಸಿಲುಕಿದ್ದಾರೆ.
ಈ ವೇಳೆ ಅಪಘಾತ ಸಂಭವಿಸುತ್ತಿದ್ದಂತೆಯೇ ಸುತ್ತಮುತ್ತಲಿದ್ದ ಜನರು ಕಿರುಚುತ್ತಾ ಸ್ಥಳಕ್ಕೆ ಧಾವಿಸಿದ್ದಾರೆ. ತಕ್ಷಣವೇ ಕಾರ್ಯಪ್ರವೃತ್ತರಾದ ಸ್ಥಳೀಯರು, ಟ್ರಾಕ್ಟರ್ ಅಡಿಯಲ್ಲಿ ಸಿಲುಕಿದ್ದ ಮಹಿಳೆಯನ್ನು ಹರಸಾಹಸ ಪಟ್ಟು ಹೊರತೆಗೆದಿದ್ದಾರೆ. ತೀವ್ರ ರಕ್ತಸ್ರಾವದಿಂದ ಬಳಲುತ್ತಿದ್ದ ಅವರನ್ನು ಕೂಡಲೇ ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸದ್ಯ ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ಸ್ಥಿತಿ ಸ್ಥಿರವಾಗಿದೆ ಎಂದು ವರದಿಯಾಗಿದೆ.
ಆರೋಪಿ ಚಾಲಕನು ಮದ್ಯ ಸೇವಿಸಿ ಟ್ರಾಕ್ಟರ್ ಚಲಾಯಿಸುತ್ತಿದ್ದನೆಂದು ಪ್ರತ್ಯಕ್ಷದರ್ಶಿಗಳು ಆರೋಪಿಸಿದ್ದಾರೆ. ಅಪಘಾತ ಸಂಭವಿಸುತ್ತಿದ್ದಂತೆಯೇ ಚಾಲಕನು ಸ್ಥಳದಿಂದ ಪರಾರಿಯಾಗಿದ್ದಾನೆ. ಈ ಭೀಕರ ದೃಶ್ಯಗಳು ಅಲ್ಲಿನ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಸೂರತ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ತಲೆಮರೆಸಿಕೊಂಡಿರುವ ಚಾಲಕನಿಗಾಗಿ ಹುಡುಕಾಟ ನಡೆಸಿದ್ದಾರೆ.
PublicNext
03/02/2026 03:53 pm