ಚಿಕ್ಕಮಗಳೂರು : ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಮೂರು ವರ್ಷಗಳಾಗುತ್ತಿದ್ದರೂ ಮೂಡಿಗೆರೆ ಕ್ಷೇತ್ರದ ಅಭಿವೃದ್ಧಿ ಸಂಪೂರ್ಣ ಕುಂಠಿತಗೊಂಡಿದೆ ಎಂದು ಸರ್ಕಾರ ಹಾಗೂ ಕ್ಷೇತ್ರದ ಶಾಸಕರ ವಿರುದ್ಧ ಬಿಜೆಪಿ ಮುಖಂಡ ದೀಪಕ್ ದೊಡ್ಡಯ್ಯ ವಾಗ್ದಾಳಿ ನಡೆಸಿದರು. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಶಾಸಕರು ಕೇವಲ ಹಿತವಚನಗಳಿಗೆ ಸೀಮಿತವಾಗಿದ್ದು, ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸುವಲ್ಲಿ ವಿಫಲರಾಗಿದ್ದಾರೆ.
2019ರ ಅತಿವೃಷ್ಟಿಯಿಂದ ತೊಂದರೆಗೀಡಾದ ಮಲೆಮನೆ ಮತ್ತು ಮಧುಗುಂಡಿ ಗ್ರಾಮಗಳ ಸಂತ್ರಸ್ತರಿಗೆ ಪರಿಹಾರ ದೊರಕಿಸಿಕೊಡುವಲ್ಲಿ ಯಾವುದೇ ಆಸಕ್ತಿ ತೋರುತ್ತಿಲ್ಲ. ಹಿಂದಿನ ಬಿಜೆಪಿ ಸರ್ಕಾರದಲ್ಲಿ ಆರಂಭವಾಗಿದ್ದ ಸಂತ್ರಸ್ತರಿಗೆ ಪರ್ಯಾಯ ಭೂಮಿ ನೀಡುವ ಪ್ರಕ್ರಿಯೆಯನ್ನೂ ಈಗಿನ ಶಾಸಕರು ಮುಂದುವರಿಸಿಲ್ಲ ಎಂದು ಅವರು ದೂರಿದ್ದಾರೆ.
ಕ್ಷೇತ್ರದಲ್ಲಿ ಆನೆ ಮತ್ತು ಕಾಡುಪ್ರಾಣಿಗಳ ಹಾವಳಿ ಹೆಚ್ಚಾಗಿದ್ದು, ಸಾವು-ನೋವುಗಳು ಸಂಭವಿಸಿದಾಗ ಮಾತ್ರ ಅರಣ್ಯ ಸಚಿವರು ಆದೇಶ ನೀಡುತ್ತಾರೆ ಹೊರತು ಶಾಶ್ವತ ಪರಿಹಾರಕ್ಕಾಗಿ ಆನೆ ತಡೆಬೇಲಿ ಅಥವಾ ಆನೆ ಶಿಬಿರ ಸ್ಥಾಪಿಸುವ ಯೋಜನೆಗಳು ಕಾರ್ಯಗತಗೊಂಡಿಲ್ಲ. ಅಷ್ಟೇ ಅಲ್ಲದೆ, ಕಳಸವನ್ನು ತಾಲ್ಲೂಕು ಕೇಂದ್ರವಾಗಿ ಘೋಷಿಸಿದ್ದರೂ ಕಳೆದ ಮೂರು ವರ್ಷಗಳಲ್ಲಿ ಯಾವುದೇ ಮೂಲಸೌಕರ್ಯಗಳನ್ನು ಕಲ್ಪಿಸಿಲ್ಲ ಮತ್ತು ತಾಲ್ಲೂಕು ಕಚೇರಿ ಕಟ್ಟಡ ನಿರ್ಮಾಣಕ್ಕೆ ಅನುದಾನ ಮಂಜೂರು ಮಾಡುವಲ್ಲಿ ಶಾಸಕರು ವಿಫಲರಾಗಿದ್ದಾರೆ ಕ್ಷೇತ್ರದ ರಸ್ತೆಗಳ ದುಸ್ಥಿತಿ ಹದಗೆಟ್ಟಿದ್ದು, ಕೇವಲ ಗುಂಡಿ ಮುಚ್ಚುವ ಕೆಲಸಗಳನ್ನು ಅವೈಜ್ಞಾನಿಕವಾಗಿ ಮಾಡಲಾಗುತ್ತಿದೆ. ಸಂಸೆ ಗ್ರಾಮದಲ್ಲಿ ನಿರ್ಮಿಸಿರುವ ಕಾಂಕ್ರೀಟ್ ರಸ್ತೆ ಕಾಮಗಾರಿಯು ಕಳಪೆ ಕಾಮಗಾರಿಗೆ ದೊಡ್ಡ ಉದಾಹರಣೆಯಾಗಿದೆ ಎಂದು ದೀಪಕ್ ದೊಡ್ಡಯ್ಯ ಅಸಮಾಧಾನ ಕಿಡಿ ಕಾರಿದರು.
ಶಾಸಕರು ತಮ್ಮ ಅಧಿಕಾರಾವಧಿಯ ಉಳಿದ ಎರಡು ವರ್ಷಗಳಲ್ಲಾದರೂ ಜನರ ಸಮಸ್ಯೆಗಳಿಗೆ ಸ್ಪಂದಿಸಿ, ಅಭಿವೃದ್ಧಿಗೆ ಒತ್ತು ನೀಡಬೇಕೆಂದು ಅವರು ಈ ಸಂದರ್ಭದಲ್ಲಿ ಒತ್ತಾಯಿಸಿದ್ದಾರೆ.
PublicNext
03/02/2026 05:02 pm