ಚಿಕ್ಕಮಗಳೂರು: ಸಾಲಗಾರನಿಗೆ ವಂಚನೆ ಮಾಡಿದೆ ಎಂದು ಆರೋಪಿಸಿ ಚಿಕ್ಕಮಗಳೂರಿನ ಎಂ.ಜಿ. ರಸ್ತೆಯಲ್ಲಿರುವ ಎಚ್‌ಡಿಎಫ್‌ಸಿ ಬ್ಯಾಂಕ್ ಎದುರು ದಲಿತಪರ ಸಂಘಟನೆಗಳು ಅನಿರ್ದಿಷ್ಟಾವಧಿ ಧರಣಿ ಆರಂಭಿಸಿವೆ. ಗೌಡನಹಳ್ಳಿಯ ಮಂಜುನಾಥ್ ಎಂಬ ಯುವಕನಿಗೆ ಬ್ಯಾಂಕ್‌ನಿಂದ ಅನ್ಯಾಯವಾಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿದ್ದು, ಈ ಹಿನ್ನೆಲೆಯಲ್ಲಿ ಸಂಘಟನೆಗಳು ಪ್ರತಿಭಟನೆಗೆ ಇಳಿದಿವೆ.
ಜೆಸಿಬಿ ಸೀಜ್ ಮತ್ತು ಮರುಪಾವತಿ ವಿವಾದ
ಮಂಜುನಾಥ್ ಅವರು 2024ರಲ್ಲಿ ಇದೇ ಬ್ಯಾಂಕ್‌ನಿಂದ 30 ಲಕ್ಷ ರೂಪಾಯಿ ಸಾಲ ಪಡೆದು ಜೆಸಿಬಿ ಯಂತ್ರವನ್ನು ಖರೀದಿಸಿದ್ದರು. ಈಗಾಗಲೇ ಅವರು 10 ಲಕ್ಷ ರೂಪಾಯಿ ಹಣವನ್ನು ಮರುಪಾವತಿಸಿದ್ದಾರೆ. ಆದರೆ, ಒಂದೆರಡು ಕಂತುಗಳ ಪಾವತಿ ವಿಳಂಬವಾದ ಕಾರಣಕ್ಕೆ ಬ್ಯಾಂಕ್ ಅಧಿಕಾರಿಗಳು ಯಾವುದೇ ಮುನ್ಸೂಚನೆ ಅಥವಾ ನೋಟಿಸ್ ನೀಡದೆ ಕಳೆದ ಜುಲೈನಲ್ಲಿ ಜೆಸಿಬಿ ಯಂತ್ರವನ್ನು ಸೀಜ್ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಆಘಾತಕಾರಿ ಉತ್ತರ ಮತ್ತು ಪ್ರತಿಭಟನಾಕಾರರ ಎಚ್ಚರಿಕೆ
ಸೀಜ್ ಮಾಡಲಾಗಿದ್ದ ಜೆಸಿಬಿ ಯಂತ್ರವನ್ನು ವಾಪಸ್ ಪಡೆಯಲು ಹಣದೊಂದಿಗೆ ಬ್ಯಾಂಕ್‌ಗೆ ತೆರಳಿದ ಮಂಜುನಾಥ್‌ಗೆ ಅಧಿಕಾರಿಗಳು ಆಘಾತಕಾರಿ ಉತ್ತರ ನೀಡಿದ್ದಾರೆ. "ನಿಮ್ಮ ಜೆಸಿಬಿ ಈಗಾಗಲೇ ಹರಾಜಾಗಿದೆ" ಎಂದು ಹೇಳುವ ಮೂಲಕ ಬ್ಯಾಂಕ್ ಸಿಬ್ಬಂದಿ ಬೇಜವಾಬ್ದಾರಿಯುತವಾಗಿ ವರ್ತಿಸುತ್ತಿದ್ದಾರೆ ಎನ್ನಲಾಗಿದೆ. ಲಕ್ಷಾಂತರ ರೂಪಾಯಿ ಹಣ ಕಟ್ಟಿದರೂ ಸರಿಯಾದ ಸ್ಪಂದನೆ ನೀಡದ ಬ್ಯಾಂಕ್ ಅಧಿಕಾರಿಗಳ ನಡೆಯಿಂದ ಬೇಸತ್ತ ಮಂಜುನಾಥ್, ದಲಿತಪರ ಸಂಘಟನೆಗಳ ಮೊರೆ ಹೋಗಿದ್ದಾರೆ. ಸದ್ಯ ಬ್ಯಾಂಕ್ ಮುಂದೆ ಪ್ರತಿಭಟನೆ ಮುಂದುವರಿದಿದ್ದು, ಸೀಜ್ ಮಾಡಲಾದ ಜೆಸಿಬಿ ಯಂತ್ರವನ್ನು ಮರಳಿ ನೀಡುವವರೆಗೂ ಹೋರಾಟ ಕೈಬಿಡುವುದಿಲ್ಲ ಎಂದು ಪ್ರತಿಭಟನಾಕಾರರು ಎಚ್ಚರಿಕೆ ನೀಡಿದ್ದಾರೆ.
PublicNext
03/02/2026 11:42 am
LOADING...