ಚಿಕ್ಕಮಗಳೂರು : ಮೊಬೈಲ್ ಅಂಗಡಿಯಲ್ಲಿ ಕಳ್ಳರು ಕೈಚಳಕ ತೋರಿದ್ದು ಲಕ್ಷಾಂತರ ಹಣವನ್ನು ಎಗರಿಸಿದ್ದಾರೆ. ಚಿಕ್ಕಮಗಳೂರು ತಾಲೂಕಿನ ಆಲ್ದೂರು ಬಿ.ಹೆಚ್. ರಸ್ತೆಯ ಸರ್ಕಾರಿ ಶಾಲೆಯ ಎದುರಿಗಿರುವ 'ಕನ್ವೆಕ್ಷಿಂಗ್ ಪಾಯಿಂಟ್' ಮೊಬೈಲ್ ಅಕ್ಸೆಸರಿಸ್ ಮತ್ತು ಮನಿ ಟ್ರಾನ್ಸ್‌ಫರ್ ಅಂಗಡಿಯಲ್ಲಿ ಕಳ್ಳತನ ನಡೆದಿದೆ.
ಫೆಬ್ರವರಿ 3ರ ಬೆಳಿಗ್ಗೆ ಅಂಗಡಿಯ ಮಾಲೀಕ ವಸಿಂ ಅಹಮದ್ ಅವರು ಎಂದಿನಂತೆ ಕೆಲಸಕ್ಕೆ ಬಂದಾಗ ಕಳ್ಳತನ ನಡೆದಿರುವುದು ಬೆಳಕಿಗೆ ಬಂದಿದೆ. ಅಂಗಡಿಯ ಮೇಲ್ಛಾವಣಿಯ ಹೆಂಚುಗಳನ್ನು ತೆಗೆದು, ಸೀಲಿಂಗ್ ಮುರಿದು ಕಳ್ಳರು ಒಳನುಗ್ಗಿದ್ದಾರೆ. ಅಂಗಡಿಯ ಸಿಸಿಟಿವಿ ಕ್ಯಾಮರಾಗಳನ್ನು ಪರಿಶೀಲಿಸಿದಾಗ, ಮಧ್ಯರಾತ್ರಿ ಸುಮಾರು 12:30 ರಿಂದ 2:30 ರ ಅವಧಿಯಲ್ಲಿ ಮುಸುಕು ಧರಿಸಿದ ವ್ಯಕ್ತಿಯೊಬ್ಬ ಅಂಗಡಿಯೊಳಗೆ ನುಗ್ಗಿರುವುದು ಸೆರೆಯಾಗಿದೆ.
ಮನಿ ಟ್ರಾನ್ಸ್‌ಫರ್ ವ್ಯವಹಾರದ ನಿಮಿತ್ತ ಬ್ಯಾಂಕಿಗೆ ಜಮೆ ಮಾಡಲು ಇಟ್ಟಿದ್ದ ಒಟ್ಟು 4.36 ಲಕ್ಷ ರೂಪಾಯಿ ನಗದು ಹಣವನ್ನು ಕಳ್ಳತನ ಮಾಡಿಕೊಂಡು ಹೋಗಿದ್ದಾನೆ. ಈ ಘಟನೆಗೆ ಸಂಬಂಧಿಸಿದಂತೆ ಮಾಲೀಕರು ನೀಡಿದ ದೂರಿನ ಮೇರೆಗೆ ಆಲ್ದೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಕಳ್ಳನಿಗಾಗಿ ತೀವ್ರ ಶೋಧ ನಡೆಸುತ್ತಿದ್ದಾರೆ.
PublicNext
04/02/2026 03:03 pm
LOADING...