ತುಮಕೂರು : ನಗರದ ಗಿರಿನಗರ ಬಡಾವಣೆಯಲ್ಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರ ಅನುಮೋದಿತ ಕಾಮಧೇನು ರೈತ ಸೇವಾ ಕೇಂದ್ರ ಶನಿವಾರ ಉದ್ಘಾಟನೆಯಾಯಿತು. ಬಿಜೆಪಿ ಮುಖಂಡ ಪ್ರೇಮ್‌ಕುಮಾರ್ ಹಾಗೂ ನಿವೃತ್ತ ಪ್ರಾಚಾರ್ಯ ಮರಿಬಸಪ್ಪ ಅವರು ಈ ಕೇಂದ್ರವನ್ನು ಉದ್ಘಾಟನೆ ಮಾಡಿದರು.
ಈ ವೇಳೆ ಮಾತನಾಡಿದ ಮರಿಬಸಪ್ಪ ಅವರು, ರೈತ ಸೇವಾ ಕೇಂದ್ರದಲ್ಲಿ ವಿವಿಧ 51 ಸೌಲಭ್ಯಗಳನ್ನು ರೈತರಿಗೆ ಒದಗಿಸಲಾಗುತ್ತಿದೆ. ಇದು ಸಂಪೂರ್ಣ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಕಾರ್ಯಕ್ರಮವಾಗಿದ್ದು, ಇಲ್ಲಿ ಮಧ್ಯವರ್ತಿಗಳಿಗೆ ಅವಕಾಶವಿಲ್ಲ. ರೈತರು ಯೋಜನೆಗಳ ಪ್ರಯೋಜನ ಪಡೆಯಬಹುದು ಎಂದು ಹೇಳಿದರು.
ಸೋಲಾರ್ ಪಂಪ್ ಸೆಟ್, ಗೃಹ ಕೈಗಾರಿಕೆ, ಇತರೆ ಯೋಜನೆಗಳಿಗೆ ಸರ್ಕಾರದಿಂದ ವಿಶೇಷ ಸಬ್ಸಿಡಿ ಸೌಲಭ್ಯವಿದೆ. ಎಸ್.ಸಿ, ಎಸ್.ಟಿ. ಸಮುದಾಯದ ಫಲಾನುಭವಿಗಳಿಗೆ ವಿಶೇಷ ಸವಲತ್ತುಗಳು ಈ ಕೇಂದ್ರದಲ್ಲಿ ದೊರೆಯುತ್ತವೆ ಎಂದರು.
ಬಿಜೆಪಿ ಮುಖಂಡ ಪ್ರೇಮಕುಮಾರ್ ಮಾತನಾಡಿ, ಇದೊಂದು ರೈತಪರ ಹಾಗೂ ಮಹಿಳೆಯರ ಸೌಲಭ್ಯದ ಯೋಜನೆಯಾಗಿದೆ. ಇದರ ಮೂಲಕ ಆರ್ಥಿಕ ಚಟುವಟಿಕೆ ನಡೆಸಲು ಅವಕಾಶವಿದೆ. ಆರೋಗ್ಯ ವಿಮೆ ಮತ್ತಿತರ ಸೌಲಭ್ಯಗಳನ್ನು ಈ ಕೇಂದ್ರದಿಂದ ಪಡೆಯಬಹುದು ಎಂದು ತಿಳಿಸಿದರು.
ಸರ್ಕಾರದ ಅನೇಕ ಯೋಜನೆಗಳ ಬಗ್ಗೆ ಕಾಮಧೇನು ರೈತ ಸೇವಾ ಕೇಂದ್ರದಲ್ಲಿ ಮಾಹಿತಿ ಪಡೆದು, ಸೌಲಭ್ಯಗಳನ್ನು ಬಳಸಿಕೊಂಡು ಆರ್ಥಿಕ ಸದೃಢರಾಗುವಂತೆ ಸಲಹೆ ಮಾಡಿದರು.
ಶಾಖಾ ವ್ಯವಸ್ಥಾಪಕಿ ವಿಂದ್ಯಾಕುಮಾರ್ ರಾಮಚಂದ್ರಪ್ಪ, ಜಿಲ್ಲಾ ಮಾರ್ಕೇಟಿಂಗ್ ಅಧಿಕಾರಿ ಶಿವಕುಮಾರ್, ಉದ್ಯಮಿ ಉಮಾ ಮೊದಲಾದವರು ಭಾಗವಹಿಸಿದ್ದರು.
Kshetra Samachara
07/03/2026 09:19 pm