ಆಂಧ್ರಪ್ರದೇಶ : ಆಂಧ್ರಪ್ರದೇಶದ ವಿಜಯನಗರಂ ಜಿಲ್ಲೆಯ ರಾಮಭದ್ರಪುರಂ ಮಂಡಲದ ತಾರಾಪುರಂ ಬಳಿ ಇಂದು ಮುಂಜಾನೆ ಖಾಸಗಿ ಬಸ್‌ವೊಂದು ಧಗಧಗನೆ ಹೊತ್ತಿ ಉರಿದಿದೆ. ಹೌದು ಚಲಿಸುತ್ತಿದ್ದ ಬಸ್‌ನ ಟೈರ್ ಸ್ಫೋಟಗೊಂಡು ಬೆಂಕಿ ಕಾಣಿಸಿಕೊಂಡಿದ್ದು, ನೋಡನೋಡುತ್ತಿದ್ದಂತೆಯೇ ಇಡೀ ಬಸ್ ಭಸ್ಮವಾಗಿದೆ. ಆದರೆ, ಚಾಲಕನ ಸಮಯಪ್ರಜ್ಞೆಯಿಂದ ಬಸ್‌ನಲ್ಲಿದ್ದ ಒಟ್ಟು 37 ಪ್ರಯಾಣಿಕರು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಒಡಿಶಾದ ಭುವನೇಶ್ವರದಿಂದ ಮಲ್ಕಾನ್‌ಗಿರಿಗೆ ತೆರಳುತ್ತಿದ್ದ 'ಒಡಿಶಾ ಟ್ರಾವೆಲ್ಸ್'ಗೆ ಸೇರಿದ ಖಾಸಗಿ ಬಸ್‌ನ ಹಿಂಭಾಗದ ಟೈರ್ ಹಠಾತ್ತನೆ ಸ್ಫೋಟಗೊಂಡಿದೆ. ಟೈರ್ ಸ್ಫೋಟದ ತಕ್ಷಣವೇ ಬಸ್‌ನಲ್ಲಿ ಬೆಂಕಿ ಕಾಣಿಸಿಕೊಂಡು ಕ್ಷಣಾರ್ಧದಲ್ಲಿ ಜ್ವಾಲೆ ಇಡೀ ವಾಹನಕ್ಕೆ ವ್ಯಾಪಿಸಿದೆ.
ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆಯೇ ಎಚ್ಚೆತ್ತ ಬಸ್ ಚಾಲಕ ಕೂಡಲೇ ವಾಹನವನ್ನು ಸುರಕ್ಷಿತವಾಗಿ ನಿಲ್ಲಿಸಿದ್ದಾರೆ. ತಕ್ಷಣವೇ ಬಸ್‌ನಲ್ಲಿದ್ದ ಎಲ್ಲಾ ಪ್ರಯಾಣಿಕರಿಗೆ ಕೆಳಗೆ ಇಳಿಯುವಂತೆ ಸೂಚಿಸಿ, ಅವರನ್ನು ಸುರಕ್ಷಿತವಾಗಿ ಹೊರತರಲು ನೆರವಾಗಿದ್ದಾರೆ. ಈ ಸಂದರ್ಭದಲ್ಲಿ ಒಡಿಶಾದ ಕಾಂಗ್ರೆಸ್ ಶಾಸಕ ಮಂಗು ಖಿಲ್ಲಾ ಸೇರಿದಂತೆ ಒಟ್ಟು 37 ಪ್ರಯಾಣಿಕರು ಬಸ್‌ನಲ್ಲಿದ್ದರು ಎಂದು ತಿಳಿದುಬಂದಿದೆ.
ಇನ್ನೂ ಈ ಭೀಕರ ಅಗ್ನಿ ಅವಘಡದಲ್ಲಿ ಬಸ್ ಸಂಪೂರ್ಣವಾಗಿ ಸುಟ್ಟು ಕರಕಲಾಗಿದ್ದರೂ, ಚಾಲಕನ ಸಮಯಪ್ರಜ್ಞೆಯಿಂದ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಎಲ್ಲಾ ಪ್ರಯಾಣಿಕರು ಯಾವುದೇ ಗಾಯಗಳಿಲ್ಲದೆ ಸುರಕ್ಷಿತವಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನಾ ಸ್ಥಳಕ್ಕೆ ಬೊಬ್ಬಿಲಿ ಗ್ರಾಮಾಂತರ ಪೊಲೀಸ್ ಠಾಣೆಯ ಸಿಐ ಶ್ರೀನಿವಾಸ್ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
PublicNext
21/03/2026 01:15 pm
LOADING...