ಲಖನೌ: ಉತ್ತರ ಪ್ರದೇಶದ ಪ್ರಯಾಗ್ ರಾಜ್ ಕುಂಭಮೇಳದಲ್ಲಿ ಖ್ಯಾತಿ ಗಳಿಸಿದ್ದ ಮೊನಾಲಿಸಾ ಭೋಸ್ಲೆ ಅವರ ಮದುವೆ ವಿವಾದ ತಕ್ಷಣಕ್ಕೆ ಶಮನವಾಗುವ ಯಾವುದೇ ಲಕ್ಷಣಗಳು ಕಾಣಿಸುತ್ತಿಲ್ಲ. ಆಕೆಯನ್ನು ನಾಯಕಿಯನ್ನಾಗಿ ಮಾಡುವುದಾಗಿ ಹೇಳಿದ್ದ ಚಿತ್ರ ನಿರ್ದೇಶಕ ಸನೋಜ್ ಮಿಶ್ರಾ, ಇದು 'ಲವ್ ಜಿಹಾದ್' ಪಿತೂರಿ ಎಂದು ಕಿಡಿಕಾರಿದ್ದಾರೆ.
ಇತ್ತೀಚೆಗೆ, ಮೊನಾಲಿಸಾ ಕುಟುಂಬದ ಇಚ್ಛೆಗೆ ವಿರುದ್ಧವಾಗಿ, ಪೊಲೀಸ್ ರಕ್ಷಣೆಯಲ್ಲಿ ತನ್ನ ಮುಸ್ಲಿಂ ಗೆಳೆಯ ಫರ್ಮಾನ್ ಖಾನ್ ಅವರನ್ನು ವಿವಾಹವಾಗಿದ್ದರು. ಈ ಬೆಳವಣಿಗೆಯ ನಂತರ, ಮೊನಾಲಿಸಾ ಅವರ ಕುಟುಂಬವು ವಿವಾಹವನ್ನು ವಿರೋಧಿಸಿದ್ದಲ್ಲದೆ, ಮದುವೆಯ ಕುರಿತು ಹಲವು ಪ್ರಶ್ನೆಗಳನ್ನು ಎತ್ತಿದೆ. ಈ ನಡುವೆ, ಮೊನಾಲಿಸಾ ಅವರ ಚೊಚ್ಚಲ ಚಿತ್ರ ‘ದಿ ಡೈರಿ ಆಫ್ ಮಣಿಪುರ’ದ ನಿರ್ದೇಶಕ ಸನೋಜ್ ಮಿಶ್ರಾ ಅವರ ಹೇಳಿಕೆಯೂ ಹೊರಬಿದ್ದಿದ್ದು, ಇದನ್ನು 'ಲವ್ ಜಿಹಾದ್' ಎಂದು ಅವರು ಬಲವಾಗಿ ಖಂಡಿಸಿದ್ದಾರೆ.
ನಿರ್ದೇಶಕ ಸನೋಜ್ ಮಿಶ್ರಾ, ಮೊನಾಲಿಸಾ ಮತ್ತು ಫರ್ಮಾನ್ ಅವರ ವಿವಾಹದ ಬಗ್ಗೆ ಹಲವು ಗಂಭೀರ ಆರೋಪಗಳನ್ನು ಮಾಡಿದ್ದು, ಇದನ್ನು 'ಲವ್ ಜಿಹಾದ್' ಎಂದು ಕರೆದಿದ್ದಾರೆ. ಈ ವಿಷಯ ಕೇವಲ ಮದುವೆಗೆ ಸೀಮಿತವಾಗಿಲ್ಲ, ಇದರ ಹಿಂದೆ ದೊಡ್ಡ ಜಾಲದ ಪಿತೂರಿ ಇರಬಹುದು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಸನೋಜ್ ಮಿಶ್ರಾ ಅವರ ಪ್ರಕಾರ, "ದೆಹಲಿ ಮತ್ತು ಮಧ್ಯಪ್ರದೇಶದಿಂದ ಹುಡುಗಿಯರು ಕಣ್ಮರೆಯಾಗುವ ಸುದ್ದಿಗಳು ನಿರಂತರವಾಗಿ ಬರುತ್ತಿವೆ. ಈ ಪ್ರಕರಣವನ್ನು ಸಂಪೂರ್ಣವಾಗಿ ತನಿಖೆ ಮಾಡಬೇಕು. ತನಿಖೆ ನಡೆಸಿದರೆ, ಇದರಲ್ಲಿ ಕೇರಳ ಸರ್ಕಾರ ಪ್ರಮುಖ ಪಾತ್ರ ವಹಿಸಿರುವುದು ಬಯಲಾಗಬಹುದು." ಸನಾತನ ಧರ್ಮವನ್ನು ಕೆಣಕುವಲ್ಲಿ ಕೇರಳ ಸರ್ಕಾರ ಯಾವಾಗಲೂ ಮುಂಚೂಣಿಯಲ್ಲಿದೆ ಎಂದು ಆರೋಪಿಸಿರುವ ಅವರು, ಸಿಎಎ ವಿರೋಧಿ ಪ್ರತಿಭಟನೆಯ ಸಂದರ್ಭದಲ್ಲಿ ಫರ್ಮಾನ್ ಖಾನ್ ಶಾರ್ಜೀಲ್ ಇಮಾಮ್ ಅವರೊಂದಿಗೆ ಹಲವು ಬಾರಿ ಕಾಣಿಸಿಕೊಂಡಿದ್ದರು ಎಂದು ಹೇಳಿದ್ದಾರೆ.
ಇದೇ ವೇಳೆ, "ಫರ್ಮಾನ್ ಒಬ್ಬ ನಟನೇ ಅಲ್ಲ. ಅವರ ಯಾವುದೇ ಚಿತ್ರಗಳು ಬಿಡುಗಡೆಯಾಗಿಲ್ಲ" ಎಂದು ಸನೋಜ್ ಸ್ಪಷ್ಟಪಡಿಸಿದ್ದಾರೆ. ಇದು ಭಾರತದ ಪ್ರತಿಯೊಬ್ಬ ಹುಡುಗಿಯ ಸುರಕ್ಷತೆಯ ವಿಷಯವಾಗಿರುವುದರಿಂದ, ಈ ವಿಷಯವನ್ನು ತನಿಖೆ ಮಾಡಬೇಕು" ಎಂದು ಸನೋಜ್ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರಿಗೆ ಮನವಿ ಮಾಡಿದ್ದಾರೆ.
PublicNext
21/03/2026 01:47 pm