ಬೆಂಗಳೂರು: ನಟಿ ರಮ್ಯಾ ಅವರು ಸಿನಿಮಾ ನಿರ್ಮಾಣದ ಕುರಿತು ಮಹತ್ವದ ಹೇಳಿಕೆಯೊಂದನ್ನು ನೀಡಿದ್ದು, "ಸಿನಿಮಾ ಮಾಡುವುದಾದರೆ ಮಾಡಿ, ಆದರೆ ಧರ್ಮದ ಹೆಸರಿನಲ್ಲಿ ಹಿಂಸೆ ಪ್ರಚಾರ ಮಾಡಬೇಡಿ ಹಾಗೂ ಪವಿತ್ರ ಗ್ರಂಥಗಳನ್ನು ತಪ್ಪಾಗಿ ಬಳಸಬೇಡಿ" ಎಂದು ಖಡಾಖಂಡಿತವಾಗಿ ಹೇಳಿದ್ದಾರೆ.
ಹೌದು 'ಧುರಂಧರ್ 2' ಚಿತ್ರದ ಕುರಿತು ಮತ್ತೊಮ್ಮೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿರುವ ರಮ್ಯಾ, ಭಗವದ್ಗೀತೆಯಂತಹ ಪವಿತ್ರ ಗ್ರಂಥಗಳನ್ನು ಸಿನಿಮಾಗಳಲ್ಲಿ ತಪ್ಪಾಗಿ ಅರ್ಥೈಸಿ, ಹಿಂಸೆ ಮತ್ತು ಸಂಘರ್ಷಕ್ಕೆ ನ್ಯಾಯ ಒದಗಿಸುವ ರೀತಿಯಲ್ಲಿ ಬಳಸಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡಿರುವ ರಮ್ಯಾ, ಭಗವದ್ಗೀತೆಯ ನಿಜವಾದ ಅರ್ಥವನ್ನು ವಿವರಿಸುವ ಪ್ರಯತ್ನ ಮಾಡಿದ್ದಾರೆ. ಕೃಷ್ಣನು ಅರ್ಜುನನಿಗೆ ಹೇಳುವ ಯುದ್ಧವು ಕೇವಲ ಭೌತಿಕ ಸಮರವಲ್ಲ, ಬದಲಿಗೆ ಅದು ಮಾನವನೊಳಗಿನ ಮನಸ್ಸಿನ ಸಂಘರ್ಷವಾಗಿದೆ ಎಂದಿದ್ದಾರೆ. "ಆತ್ಮನೇ ಸ್ನೇಹಿತ, ಆತ್ಮನೇ ಶತ್ರು" ಎಂಬ ವಾಕ್ಯವನ್ನು ಉಲ್ಲೇಖಿಸಿ, ಹೊರಗಿನ ಶತ್ರುಗಳಿಗಿಂತ ನಮ್ಮೊಳಗಿನ ಅಹಂಕಾರ, ಆಸೆ, ಅಜ್ಞಾನ ಮತ್ತು ಅಸ್ಥಿರ ಮನಸ್ಸೇ ನಿಜವಾದ ಶತ್ರು ಎಂದು ಪ್ರತಿಪಾದಿಸಿದ್ದಾರೆ. ಮನಸ್ಸು ಅಲೆದಾಡಿದಾಗ, ಅದನ್ನು ಮತ್ತೆ ಆತ್ಮದ ಕಡೆಗೆ ಕರೆತರಬೇಕು. ಧರ್ಮವೆಂದರೆ ಇತರರ ವಿರುದ್ಧ ಹೋರಾಡುವುದಲ್ಲ, ಬದಲಾಗಿ ತನ್ನ ಸ್ವಭಾವದೊಂದಿಗೆ ಹೊಂದಾಣಿಕೆ ಸಾಧಿಸುವುದು, ಆತ್ಮಜ್ಞಾನವನ್ನು ಅರಸುವುದು ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಸಿನಿಮಾಗಳಲ್ಲಿ ಪವಿತ್ರ ಗ್ರಂಥಗಳನ್ನು ಕಥೆಗೆ ತಕ್ಕಂತೆ ತಿರುಚಿ ಪ್ರಚಾರ ಮಾಡುವ ಪ್ರವೃತ್ತಿಯ ಬಗ್ಗೆಯೂ ರಮ್ಯಾ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. "ಸಿನಿಮಾ ಮಾಡಬೇಕು ಎಂದರೆ ಮಾಡಿ, ಆದರೆ ಪವಿತ್ರ ಗ್ರಂಥಗಳನ್ನು ತಪ್ಪಾಗಿ ಬಳಸಬೇಡಿ" ಎಂದು ಅವರು ಪುನರುಚ್ಚರಿಸಿದ್ದಾರೆ.
ಇದೇ ವೇಳೆ ನಟ ರಣವೀರ್ ಸಿಂಗ್ ಅವರ ಅಭಿನಯದ ಕುರಿತಂತೆಯೂ ರಮ್ಯಾ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. "ನನಗೆ ರಣವೀರ್ ಸಿಂಗ್ ಇಷ್ಟ. ಅವರು 'ಧುರಂಧರ್ ಭಾಗ 1' ರಲ್ಲಿ ಅದ್ಭುತವಾಗಿ ನಟಿಸಿದ್ದರು. ಅವರ ಸಂಯಮವು ನಟನಾಗಿ ಅವರ ಸಾಮರ್ಥ್ಯವನ್ನು ನಿಜವಾಗಿಯೂ ಸಾಬೀತುಪಡಿಸಿದೆ. ಆದರೆ, 'ಧುರಂಧರ್ 2'ನಲ್ಲಿ ಅತಿಯಾದ ಕೋಪ ಮತ್ತು ಹಿಂಸೆಗೆ ಹೆಚ್ಚು ಪ್ರಾಮುಖ್ಯತೆ ನೀಡಿರುವುದರಿಂದ ಅವರ ಪ್ರತಿಭೆಯನ್ನು ಪೂರ್ಣವಾಗಿ ಬಳಸಿಕೊಳ್ಳಲಾಗಿಲ್ಲ" ಎಂದು ಅಭಿಪ್ರಾಯಪಟ್ಟಿದ್ದಾರೆ. "ರಣವೀರ್ ಇನ್ನೂ ಉತ್ತಮವಾಗಿ ನಟಿಸಬಲ್ಲವರು. ಅವರಿಂದ ಇನ್ನಷ್ಟು ಉತ್ತಮ ಪ್ರದರ್ಶನವನ್ನು ನಿರೀಕ್ಷಿಸುತ್ತಿದ್ದೇನೆ. ಅವರ ಮುಂದಿನ ಚಿತ್ರಕ್ಕಾಗಿ ಎದುರು ನೋಡುತ್ತಿದ್ದೇನೆ" ಎಂದು ತಿಳಿಸಿದ್ದಾರೆ.
ರಮ್ಯಾ ಅವರ ಈ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದ್ದು, ಕೆಲವರು ಅವರ ಅಭಿಪ್ರಾಯವನ್ನು ಬೆಂಬಲಿಸಿದರೆ, ಇನ್ನೂ ಕೆಲವರು ಟೀಕೆಗಳನ್ನು ವ್ಯಕ್ತಪಡಿಸುತ್ತಿದ್ದಾರೆ.
PublicNext
21/03/2026 04:57 pm