ಸೇಲಂ: ತಮಿಳುನಾಡಿನ ಸೇಲಂ ರಾಷ್ಟ್ರೀಯ ಹೆದ್ದಾರಿಯ ಉತ್ಥಮಸೋಲಾಪುರಂ ಸಮೀಪದ ಅರಿಯನೂರು ಬಳಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ರಾಜ್ಯ ಸಾರಿಗೆ ನಿಗಮದ (TNSTC) ಬಸ್ ನಿಯಂತ್ರಣ ತಪ್ಪಿ ಎದುರಿನ ವಾಹನಗಳಿಗೆ ಡಿಕ್ಕಿ ಹೊಡೆದ ಪರಿಣಾಮ ಎಂಟು ಮಂದಿ ದುರ್ಮರಣಕ್ಕೀಡಾಗಿದ್ದಾರೆ.
ಕೊಯಂಬತ್ತೂರಿನಿಂದ ಸೇಲಂ ಕಡೆಗೆ ಸುಮಾರು 40ಕ್ಕೂ ಹೆಚ್ಚು ಪ್ರಯಾಣಿಕರೊಂದಿಗೆ ಸಾಗುತ್ತಿದ್ದ ಈ ಬಸ್ಸು, ತನ್ನ ಲೇನ್‌ನಿಂದ ದಿಢೀರ್‌ನೆ ತಪ್ಪಿ, ಮಧ್ಯದ ಡಿವೈಡರ್ ದಾಟಿ ಎದುರು ದಾರಿಗೆ ನುಗ್ಗಿದೆ. ಸಿಸಿಟಿವಿ ದೃಶ್ಯಾವಳಿಗಳಲ್ಲಿ ಬಸ್ಸು ಎದುರು ದಾರಿಯಲ್ಲಿ ಬರುತ್ತಿದ್ದ ಟೆಂಪೋ ಮಾದರಿಯ ಸರಕು ಆಟೋ ಮತ್ತು ದ್ವಿಚಕ್ರ ವಾಹನಕ್ಕೆ ನೇರವಾಗಿ ಡಿಕ್ಕಿ ಹೊಡೆಯುತ್ತಿರುವುದು ಸ್ಪಷ್ಟವಾಗಿ ಕಾಣಿಸುತ್ತದೆ.
ಸರಕು ಆಟೋದಲ್ಲಿ ಒಂದೇ ಕುಟುಂಬದ 10ಕ್ಕೂ ಹೆಚ್ಚು ಮಂದಿ ಪ್ರಯಾಣಿಸುತ್ತಿದ್ದರು ಎನ್ನಲಾಗಿದೆ. ಕಾರ್ಯಕ್ರಮವೊಂದನ್ನು ಮುಗಿಸಿ ವಾಪಸ್ಸಾಗುತ್ತಿದ್ದಾಗ ಈ ದುರಂತ ಸಂಭವಿಸಿದೆ. ಮೃತರನ್ನು ಸೆಲ್ವರಾಜ್, ಮುರುಗನ್, ಅಮುದಾ, ಮನಿಕಂದನ್, ಇರುಸಾಯಿ, ಸತ್ಯ (ಮನಿಕಂದನ್ ಅವರ ಪತ್ನಿ), ಐದು ವರ್ಷದ ನಿಧಿಷಾ ಮತ್ತು 11 ತಿಂಗಳ ಜೀವುಕಾ ಎಂದು ಗುರುತಿಸಲಾಗಿದೆ. ಈ ದುರಂತದಲ್ಲಿ ಇಬ್ಬರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ. ಅಪಘಾತದಲ್ಲಿ ಹಲವರಿಗೆ ಗಾಯಗಳಾಗಿದ್ದು, ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಬಸ್ಸಿನಲ್ಲಿದ್ದ ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ವರದಿಯಾಗಿದೆ.
ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಚಾಲಕನ ಅತಿ ವೇಗ ಅಥವಾ ಬಸ್ಸಿನ ಯಾಂತ್ರಿಕ ದೋಷದಿಂದಾಗಿ ನಿಯಂತ್ರಣ ಕಳೆದುಕೊಂಡು ಈ ಅಪಘಾತ ಸಂಭವಿಸಿದೆಯೇ ಎಂಬುದರ ಬಗ್ಗೆ ಪ್ರಾಥಮಿಕ ವಿಚಾರಣೆ ನಡೆಯುತ್ತಿದೆ.
ಘಟನೆಗೆ ಪ್ರತಿಕ್ರಿಯೆ ನೀಡಿರುವ ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಎಡಪ್ಪಾಡಿ ಕೆ. ಪಳನಿಸ್ವಾಮಿ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಸರ್ಕಾರಿ ಬಸ್‌ಗಳಲ್ಲಿ ನಿರಂತರವಾಗಿ ಸಂಭವಿಸುತ್ತಿರುವ ಅಪಘಾತಗಳು ನಿರ್ವಹಣಾ ಕೊರತೆಯನ್ನು ಸ್ಪಷ್ಟವಾಗಿ ಸೂಚಿಸುತ್ತವೆ ಎಂದು ಅವರು ಆರೋಪಿಸಿದ್ದಾರೆ. ಮೃತರ ಕುಟುಂಬಗಳಿಗೆ ಸಂತಾಪ ಸೂಚಿಸಿದ ಪಳನಿಸ್ವಾಮಿ ಅವರು, ಗಾಯಗೊಂಡವರು ಶೀಘ್ರ ಚೇತರಿಸಿಕೊಳ್ಳಲಿ ಎಂದು ಹಾರೈಸಿದ್ದಾರೆ.
PublicNext
21/03/2026 12:47 pm