ರಾಂಚಿ: ಇರಾನ್ ಹಾರ್ಮುಝ್ ಜಲಸಂಧಿಯನ್ನು ಮುಚ್ಚಿದ ಹಿನ್ನೆಲೆಯಲ್ಲಿ ಕಳೆದ 20 ದಿನಗಳಿಂದ ಪರ್ಶಿಯನ್ ಕೊಲ್ಲಿಯಲ್ಲಿ ಸಿಕ್ಕಿಹಾಕಿಕೊಂಡಿದ್ದ ವ್ಯಾಪಾರಿ ಹಡಗಿನ ಕ್ಯಾಪ್ಟನ್ ರಾಕೇಶ್ ರಂಜನ್ ಸಿಂಗ್ ಮಾರ್ಚ್ 18ರಂದು ತೀವ್ರ ಹೃದಯಾಘಾತಕ್ಕೆ ಈಡಾಗಿ ಮೃತಪಟ್ಟಿದ್ದಾರೆ ಎಂದು ಅವರ ಕುಟುಂಬದವರು ಪ್ರಕಟಿಸಿದ್ದಾರೆ.
ಪನಾಮಾ ಧ್ವಜದಡಿ ಸಂಚರಿಸುತ್ತಿದ್ದ 'ಎಎಸ್‍ಪಿ ಅವಾನಾ' ಹಡಗನ್ನು ಜಲಸಂಧಿ ದಾಟಿಸುವ ಹೊಣೆಹೊತ್ತಿದ್ದ 47 ವರ್ಷ ವಯಸ್ಸಿನ ಸಿಂಗ್, ತೀವ್ರ ಎದೆನೋವಿನಿಂದ ಎದೆ ಹಿಡಿದುಕೊಂಡು ಕ್ಯಾಪ್ಟನ್ ಡೆಕ್‌ನ ಕುರ್ಚಿಯಲ್ಲೇ ಕುಸಿದು ಬಿದ್ದರು. ಹಡಗಿನಲ್ಲಿದ್ದ ವೈದ್ಯರು ತಕ್ಷಣವೇ ತಪಾಸಣೆ ನಡೆಸಿ, ಆಸ್ಪತ್ರೆಗೆ ಸಾಗಿಸುವುದು ಅತ್ಯಗತ್ಯ ಎಂದು ಅಭಿಪ್ರಾಯಪಟ್ಟರು. ಆದರೆ, ಇಸ್ರೇಲ್-ಅಮೆರಿಕ-ಇರಾನ್ ನಡುವಿನ ಯುದ್ಧ ಪರಿಸ್ಥಿತಿಯ ಕಾರಣದಿಂದ ತಕ್ಷಣ ವೈದ್ಯಕೀಯ ನೆರವು ಸಾಧ್ಯವಾಗಲಿಲ್ಲ ಎಂದು ಕುಟುಂಬದವರು ಹೇಳಿದ್ದಾರೆ. ಇಸ್ರೇಲ್-ಅಮೆರಿಕ-ಇರಾನ್ ಯುದ್ಧದ ಹಿನ್ನೆಲೆಯಲ್ಲಿ ತಕ್ಷಣ ವೈದ್ಯಕೀಯ ನೆರವು ಸಿಗದೆ, ಪರ್ಶಿಯನ್ ಕೊಲ್ಲಿಯಲ್ಲಿ ಸಿಕ್ಕಿಹಾಕಿಕೊಂಡಿದ್ದ ಕ್ಯಾಪ್ಟನ್ ರಾಕೇಶ್ ರಂಜನ್ ಸಿಂಗ್ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.
ಕ್ಯಾಪ್ಟನ್ ಸಿಂಗ್ ಅವರ ಉದ್ಯೋಗದಾತ ಸಂಸ್ಥೆಯಾದ ಎಲೆಗೆಂಟ್ ಮರೈನ್ ಸರ್ವೀಸಸ್ ಪ್ರೈವೇಟ್ ಲಿಮಿಟೆಡ್, ತಕ್ಷಣವೇ ಕುಟುಂಬಕ್ಕೆ ಮಾಹಿತಿ ನೀಡಿ, ವೈದ್ಯಕೀಯ ಆರೈಕೆಗಾಗಿ ಅವರನ್ನು ಹಡಗಿನಿಂದ ಕರೆತರುವ ಪ್ರಯತ್ನ ಮಾಡಿತ್ತು. ಆದರೆ, ಸಂಘರ್ಷದ ವಾತಾವರಣದಿಂದಾಗಿ ಈ ಪ್ರಯತ್ನಕ್ಕೆ ಹಲವು ಗಂಟೆಗಳ ಕಾಲ ವಿಳಂಬವಾಯಿತು. ಅಂತಿಮವಾಗಿ ಅವರನ್ನು ಯುಎಇಯ ಪೋರ್ಟ್ ರಶೀದ್‌ನಲ್ಲಿರುವ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಆಸ್ಪತ್ರೆ ತಲುಪುವಷ್ಟರಲ್ಲಿ ಅವರು ಮೃತಪಟ್ಟಿದ್ದರು ಎಂದು ವೈದ್ಯರು ತಿಳಿಸಿದರು ಎಂದು ನೌಕಾ ಅಧಿಕಾರಿ ಕ್ಯಾಪ್ಟನ್ ಸಂಜೀವ್ ಕುಮಾರ್ ವಿವರಿಸಿದರು. ಈ ಹಡಗು ಫೆಬ್ರವರಿ 28ರಂದು ಸೌದಿ ಅರೇಬಿಯಾದಿಂದ ಕಚ್ಚಾತೈಲ ತುಂಬಿಕೊಂಡು ಹೊರಟಿತ್ತು. ಆದರೆ, ಪೋರ್ಟ್ ರಶೀದ್‌ನಲ್ಲಿ ಸಂಚಾರ ನಿರ್ಬಂಧಗಳಿದ್ದ ಕಾರಣ, ಹಾರ್ಮುಝ್ ಜಲಸಂಧಿಯ ಪ್ರವೇಶದ್ವಾರದಿಂದ ಸುಮಾರು 100 ನಾಟಿಕಲ್ ಮೈಲು ದೂರದಲ್ಲಿ ಅತಂತ್ರವಾಗಿ ನಿಂತಿತ್ತು. ಕಂಪನಿಯ ಮುಂದಿನ ಸೂಚನೆಗಾಗಿ ಕಾಯುತ್ತಿದ್ದಾಗ ಈ ದುರಂತ ಸಂಭವಿಸಿದೆ.
PublicNext
21/03/2026 03:12 pm