ಚಿಂತಾಮಣಿ : ನಗರದ ಹೊರವಲಯದ ಚಿಂತಾಮಣಿ–ಶ್ರೀನಿವಾಸಪುರ ರಸ್ತೆಯ ಮಾಡಿಕೆರೆ ಗ್ರಾಮದಲ್ಲಿ ನೆಲೆಸಿರುವ ಪುರಾಣ ಪ್ರಸಿದ್ಧ ಲಕ್ಷ್ಮೀನರಸಿಂಹಸ್ವಾಮಿ ಬ್ರಹ್ಮ ರಥೋತ್ಸವವು ಅಪಾರ ಭಕ್ತರ ಸಮ್ಮುಖದಲ್ಲಿ ಸಡಗರ ಸಂಭ್ರಮದಿಂದ ನಡೆಯಿತು.
ರಥೋತ್ಸವದ ಅಂಗವಾಗಿ ದೇವಾಲಯದ ಒಳಗೆ ಹಾಗೂ ಹೊರಗೆ ವಿಶೇಷವಾಗಿ ಅಲಂಕರಿಸಲಾಗಿತ್ತು. ದೂರದ ಸ್ಥಳಗಳಿಂದ ಬೆಳಿಗ್ಗೆಯೇ ಭಕ್ತರು ದೇವಾಲಯಕ್ಕೆ ಆಗಮಿಸಿ ಹಣ್ಣು ಕಾಯಿ ನೀಡಿ ಪೂಜೆ ಸಲ್ಲಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಸಾವಿರಾರು ಜನ ಭಕ್ತರು ಸರತಿಯ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದರು.
ಶ್ರೀ ಲಕ್ಷ್ಮೀನರಸಿಂಹಸ್ವಾಮಿಗೆ ಹೋಮಹವನ,ಹೂವಿನ ಅಲಂಕಾರ, ಅಭಿಷೇಕ, ಪ್ರಧಾನಪೂಜೆ, ಕಳಶ ಸ್ಥಾಪನೆ, ನವಗ್ರಹಗಳ ಪೂಜೆ,ನಾಗದೇವರ ಪೂಜೆ ಮತ್ತಿತರ ಧಾರ್ಮಿಕ ಕಾರ್ಯಕ್ರಮಗಳು ಶ್ರದ್ಧಾ ಭಕ್ತಿಯಿಂದ ನೆರವೇರಿದವು.
ಲಕ್ಷ್ಮೀನರಸಿಂಹಸ್ವಾಮಿ ಉತ್ಸವಮೂರ್ತಿಯನ್ನು ಮಂಗಳವಾದ್ಯ ಮತ್ತು ವೇದಘೋಷಣೆಯಲ್ಲಿ ಶಾಸ್ತ್ರೋಕ್ತವಾಗಿ ಕರೆತಂದು ಅಲಂಕೃತ ರಥದಲ್ಲಿ ಪ್ರತಿಷ್ಠಾಪಿಸಲಾಯಿತು. ರಥದಲ್ಲಿ ಸ್ವಾಮಿಯ ಪ್ರತಿಷ್ಠಾಪನೆ ಮಾಡುತ್ತಿದ್ದಂತೆ ಭಕ್ತರ ನಾಮ ಸ್ಮರಣೆ ಮುಗಿಲುಮುಟ್ಟಿತು.ಅರ್ಚಕವೃಂದ ಮತ್ತೊಮ್ಮೆ ರಥದಲ್ಲಿ ವಿಶೇಷ ಅಲಂಕಾರ ಮತ್ತು ಪೂಜೆಯನ್ನು ನೆರವೇರಿಸಿದರು.ದೇವಾಲಯದ ಧರ್ಮದರ್ಶಿಗಳು ರಥೋತ್ಸವಕ್ಕೆ ಚಾಲನೆ ನೀಡಿದರು.
ಸಾವಿರಾರು ಭಕ್ತರು ಅವರೊಂದಿಗೆ ಕೈಜೋಡಿಸಿ ರಥವನ್ನು ಎಳೆದು ಪುನೀತರಾದರು. ತೇರಿಗೆ ಬಾಳೆಹಣ್ಣು, ಧವನವನ್ನು ಸಮರ್ಪಿಸಿದರು.ನಂತರ ದೇವಾಲಯದ ಸುತ್ತಲೂ ಹಾಗೂ ಗ್ರಾಮದ ಜೋಡಿ ವೃತ್ತದಲ್ಲಿ ರಥ ಸಂಚರಿಸಿತು.ಸಾವಿರಾರು ಜನ ಭಕ್ತರು ರಥವನ್ನು ಎಳೆದು ನಾಮಸ್ಮರಣೆ ಮಾಡಿದರು. ರಥೋತ್ಸವದ ಮೆರವಣಿಗೆಯಲ್ಲಿ ಮಂಗಳವಾದ್ಯ, ತಮಟೆವಾದ್ಯ,ಕೋಲಾಟ,ಪಂಡರಿ ಭಜನೆ,ಜಾನಪದ ತಂಡಗಳು ಸೇರಿದಂತೆ ಹಲವಾರು ಜನಪದ ಹಾಗೂ ಸಾಂಸ್ಕೃತಿಕ ಕಲಾ ತಂಡಗಳು ಭಾಗವಹಿಸಿದ್ದವು. ರಾತ್ರಿ ಶ್ರೀ ಕೃಷ್ಣ ಪಾಂಡವ ವಿಜಯಂ ಪೌರಾಣಿಕ ನಾಟಕದ ಪ್ರದರ್ಶನ ಭಕ್ತರ ಮನತಣಿಸಿತು.
ಚಿಂತಾಮಣಿ ಹಾಗೂ ಸುತ್ತಮುತ್ತಲ ಗ್ರಾಮಗಳಿಂದ ಬ್ರಹ್ಮ ರಥೋತ್ಸವದಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ಸಾವಿರಾರು ಮಂದಿಗೆ ಮಜ್ಜಿಗೆ, ಪಾನಕ, ಕೋಸುಂಬರಿಯನ್ನು ವಿತರಣೆ ಮಾಡಲಾಯಿತು. ಆಗಮಿಸಿದ್ದ ಭಕ್ತರಿಗೆ ದೇವಾಲಯದಿಂದ ಅನ್ನದಾಸೋಹವನ್ನು ಏರ್ಪಡಿಸಲಾಗಿತ್ತು. ರಥೋತ್ಸವದ ಅಂಗವಾಗಿ ಮೊದಲ ದಿನ ಅಂಕುರಾರ್ಪಣೆ, ಧ್ವಜಾರೋಹಣ,ಎರಡನೇ ದಿನ ಕಲಶ ಪ್ರತಿಷ್ಠಾಪನೆ, ನಿತ್ಯ ಹೋಮ,ಶ್ರೀದೇವಿ-ಭೂದೇವಿ ಸಮೇತ ಕಲ್ಯಾಣೋತ್ಸವ ಮೂರನೇ ದಿನ ಬ್ರಹ್ಮರಥೋತ್ಸವ ನಡೆಯಿತು.
ಚಿಕ್ಕತೇಕಹಳ್ಳಿ ಡಿ. ಶಿವಕುಮಾರ್ ಪಬ್ಲಿಕ್ ನೆಕ್ಸ್ಟ್ ಚಿಕ್ಕಬಳ್ಳಾಪುರ
Kshetra Samachara
10/03/2026 04:31 pm