ರಾಮನಗರ: ಬೆಂಗಳೂರು ದಕ್ಷಿಣ ಜಿಲ್ಲೆಯ ಮಾಗಡಿ ತಾಲೂಕಿನ ಗಟ್ಟಿಪುರದಲ್ಲಿರುವ ಪ್ರಸಿದ್ಧ ಶ್ರೀ ದಕ್ಷಿಣ ಮುಖಿ ಬಸವೇಶ್ವರ ಸ್ವಾಮಿ ದೇವಸ್ಥಾನದ ಅಗ್ನಿಕೊಂಡೋತ್ಸವದ ವೇಳೆ ಅಚಾತುರ್ಯವೊಂದು ಸಂಭವಿಸಿದೆ.
ಅಗ್ನಿಕೊಂಡ ಹಾಯುವಾಗ ಆಯತಪ್ಪಿ ಕೆಂಡದ ಗುಂಡಿಗೆ ಬಿದ್ದ ದೇವಸ್ಥಾನದ ಪ್ರಧಾನ ಅರ್ಚಕ ಬಸವರಾಜು ಶಾಸ್ತ್ರಿ ಅವರು ಗಂಭೀರವಾಗಿ ಸುಟ್ಟು ಗಾಯಗೊಂಡಿದ್ದಾರೆ.
ಗ್ರಾಮದ ಹಬ್ಬದ ಅಂಗವಾಗಿ ಏರ್ಪಡಿಸಲಾಗಿದ್ದ ಈ ಅಗ್ನಿಕೊಂಡೋತ್ಸವದಲ್ಲಿ ಭಕ್ತಾದಿಗಳು ಹಾಗೂ ಅರ್ಚಕರು ಭಕ್ತಿಭಾವದಿಂದ ಪಾಲ್ಗೊಂಡಿದ್ದರು. ಧಾರ್ಮಿಕ ವಿಧಿವಿಧಾನಗಳನ್ನು ಪೂರೈಸಿದ ಬಳಿಕ ಅಗ್ನಿಕೊಂಡ ಹಾಯುವ ಸಂದರ್ಭದಲ್ಲಿ, ಪ್ರಧಾನ ಅರ್ಚಕ ಬಸವರಾಜು ಶಾಸ್ತ್ರಿ ಅವರು ಆಯತಪ್ಪಿ ಕೆಂಡದ ಗುಂಡಿಯೊಳಗೆ ಬಿದ್ದಿದ್ದಾರೆ.
ಈ ಘಟನೆಯಿಂದಾಗಿ ಅವರ ಎಡಗೈ, ಎಡಗಾಲು ಹಾಗೂ ಸೊಂಟದ ಭಾಗಕ್ಕೆ ತೀವ್ರವಾಗಿ ಬೆಂಕಿ ತಗುಲಿ ಸುಟ್ಟ ಗಾಯಗಳಾಗಿವೆ. ಕೂಡಲೇ ಸ್ಥಳದಲ್ಲಿದ್ದ ಗ್ರಾಮಸ್ಥರು ಅವರನ್ನು ರಕ್ಷಿಸಿ, ಮಾಗಡಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ನೀಡಿದ್ದಾರೆ. ಗಾಯದ ತೀವ್ರತೆ ಹೆಚ್ಚಾಗಿದ್ದರಿಂದ ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಬೆಂಗಳೂರಿನ ಆಸ್ಪತ್ರೆಗೆ ರವಾನಿಸಲಾಗಿದೆ.
PublicNext
12/03/2026 08:08 am
LOADING...