ಮಂಡ್ಯ : ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ "ಖೇಲೋ ಇಂಡಿಯಾ - ವೈಬ್ರೆಂಟ್ ಮಂಡ್ಯ' ಕಾರ್ಯಕ್ರಮವು ಮಂಡ್ಯದ ವಿ.ಸಿ. ಫಾರಂ ಕೃಷಿ ವಿಶ್ವವಿದ್ಯಾಲಯದ ಮೈದಾನದಲ್ಲಿ ಅದ್ದೂರಿಯಾಗಿ ನಡೆಯಿತು. ಕೇಂದ್ರ ಉಕ್ಕು ಮತ್ತು ಬೃಹತ್ ಕೈಗಾರಿಕಾ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ನಡೆದ ಈ ಸಮಾರಂಭದಲ್ಲಿ ಕ್ರೀಡಾಂಗಣಕ್ಕೆ ಶಂಕುಸ್ಥಾಪನೆ ನೆರವೇರಿಸಲಾಯಿತು.
ಜೆಡಿಎಸ್‌ನ ಬೃಹತ್ ಶಕ್ತಿ ಪ್ರದರ್ಶನ
ಕೇಂದ್ರ ಸರ್ಕಾರದ ಕಾರ್ಯಕ್ರಮದಲ್ಲಿ ಜೆಡಿಎಸ್ ತನ್ನ ಬೃಹತ್ ಶಕ್ತಿ ಪ್ರದರ್ಶನ ನಡೆಸಿತು. "ಖೇಲೋ ಇಂಡಿಯಾ, ವೈಬ್ರೆಂಟ್ ಮಂಡ್ಯ' ಹೆಸರಿನಲ್ಲಿ ದಳಪತಿಗಳು ತಮ್ಮ ಪಕ್ಷದ ಹಬ್ಬವನ್ನು ಆಚರಿಸಿದಂತೆ ಕಂಡುಬಂದಿತು.
ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಮತ್ತು ಕೇಂದ್ರ ಕ್ರೀಡಾ ಸಚಿವ ಡಾ. ಮನ್ಸುಖ್ ಮಾಂಡವಿಯಾ ಅವರೊಂದಿಗೆ ಜೆಡಿಎಸ್ ನಾಯಕರು ವೇದಿಕೆಯನ್ನು ಹಂಚಿಕೊಂಡರು.
ಕ್ರೀಡಾಂಗಣದ ಶಂಕುಸ್ಥಾಪನೆ
ಮಂಡ್ಯದ ವಿ.ಸಿ. ಫಾರಂನಲ್ಲಿ ಒಂದು ಎಕರೆ ಜಾಗದಲ್ಲಿ 14 ಕೋಟಿ ರೂಪಾಯಿ ವೆಚ್ಚದಲ್ಲಿ 'ಖೇಲೋ ಇಂಡಿಯಾ' ಯೋಜನೆಯಡಿ ಸುಸಜ್ಜಿತ ಕ್ರೀಡಾಂಗಣ ನಿರ್ಮಾಣವಾಗಲಿದೆ. ಕಾರ್ಯಕ್ರಮದ ವೇದಿಕೆಗೆ ಆಗಮಿಸಿದ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಹಾಗೂ ಕೇಂದ್ರ ಕ್ರೀಡಾ ಸಚಿವ ಡಾ. ಮನ್ಸುಖ್ ಮಾಂಡವಿಯಾ ಅವರು ಕ್ರೀಡಾಂಗಣಕ್ಕೆ ಶಂಕುಸ್ಥಾಪನೆ ನೆರವೇರಿಸಿದರು.
ಈ ಬೃಹತ್ ಕಾರ್ಯಕ್ರಮದಲ್ಲಿ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ನಿರ್ಮಲಾನಂದನಾಥ ಸ್ವಾಮೀಜಿ, ಕೇಂದ್ರ ಕ್ರೀಡಾ ಸಚಿವ ಡಾ. ಮನ್ಸುಖ್ ಮಾಂಡವಿಯಾ, ಜೆಡಿಎಸ್ ಶಾಸಕ ಹೆಚ್.ಟಿ. ಮಂಜು, ಮಾಜಿ ಸಚಿವ ಸಿ.ಎಸ್. ಪುಟ್ಟರಾಜು, ಡಿ.ಸಿ. ತಮ್ಮಣ್ಣ, ಮಾಜಿ ಶಾಸಕ ಸುರೇಶ್‌ಗೌಡ, ಡಾ. ಕೆ. ಅನ್ನದಾನಿ, ಜಿ.ಬಿ. ಶಿವಕುಮಾರ್, ಪರಿಷತ್ ಸದಸ್ಯ ಬೋಜೇಗೌಡ, ವಿವೇಕಾನಂದ, ಜೆಡಿಎಸ್ ಜಿಲ್ಲಾಧ್ಯಕ್ಷ ಡಿ. ರಮೇಶ್, ರಾಮಚಂದ್ರ, ದೇವೇಗೌಡರ ಸೊಸೆ, ಮಾಜಿ ಸಚಿವ ಡಿ.ಸಿ. ತಮ್ಮಣ್ಣ ಅವರ ಪುತ್ರಿ ಸೇರಿದಂತೆ ಹಲವು ಜೆಡಿಎಸ್ ಮುಖಂಡರು ಹಾಗೂ ಗಣ್ಯರು ಭಾಗವಹಿಸಿದ್ದರು.
PublicNext
14/03/2026 04:07 pm