ಶಿವಮೊಗ್ಗ: ಶಿವಮೊಗ್ಗ ಜಿಲ್ಲೆಯ ರೈಲ್ವೆ ಯೋಜನೆಗಳು ಕುರಿತು ಲೋಕಸಭೆಯಲ್ಲಿ ಸಂಸದ ಬಿ.ವೈ.ರಾಘವೇಂದ್ರ ಚರ್ಚೆ ನಡೆಸಿದರು. ರೈಲ್ವೆ ಕುರಿತು ಪ್ರಮುಖ ಬೇಡಿಕೆಗಳನ್ನು ಕೇಂದ್ರ ಸರ್ಕಾರದ ಮುಂದಿಟ್ಟಿದ್ದಾರೆ. ಕೋಟೆಗಂಗೂರು ಟರ್ಮಿನಲ್ ಅಭಿವೃದ್ಧಿ ಹಾಗೂ ಹೊಸ ರೈಲು ಮಾರ್ಗಗಳ ಕುರಿತು ಅವರು ರೈಲ್ವೆ ಸಚಿವರ ಗಮನ ಸೆಳೆದರು.
ಶಿವಮೊಗ್ಗ-ಶಿಕಾರಿಪುರ ಮಾರ್ಗ ಪ್ರಗತಿಯಲ್ಲಿದ್ದು, ಮುಂದಿನ ಹಂತವಾದ ಶಿಕಾರಿಪುರ ಮತ್ತು ರಾಣೆಬೆನ್ನೂರು ನಡುವಿನ ಮಾರ್ಗ ನಿರ್ಮಾಣಕ್ಕೆ ಕೂಡಲೇ ಟೆಂಡರ್ ಕರೆಯಬೇಕು. ಬೆಂಗಳೂರು ಮತ್ತು ಶಿವಮೊಗ್ಗ ನಡುವೆ ವೇಗದ ಸಂಚಾರಕ್ಕಾಗಿ 63 ಕಿ.ಮೀ. ಉದ್ದದ ಈ ದ್ವಿಪಥ ಯೋಜನೆಗೆ ಆಡಳಿತಾತ್ಮಕ ಅನುಮೋದನೆ ನೀಡಬೇಕು. ತಾಳಗುಪ್ಪ-ಸಿದ್ದಾಪುರ-ಶಿರಸಿ-ಹುಬ್ಬಳ್ಳಿ ಮಾರ್ಗವನ್ನು ಸೊರಬದ ಮೂಲಕವೇ ಹಾದುಹೋಗುವಂತೆ ಮಾಡಬೇಕು. ಇದರಿಂದ ಅರಣ್ಯ ನಾಶ ತಡೆಗಟ್ಟುವ ಜೊತೆಗೆ ಸೊರಬದ ಜನತೆಯ ದಶಕಗಳ ಬೇಡಿಕೆ ಈಡೇರಲಿದೆ. ಕುವೆಂಪು ಜನ್ಮಭೂಮಿ ತೀರ್ಥಹಳ್ಳಿಗೆ ರೈಲು ಸಂಪರ್ಕ ಕಲ್ಪಿಸಲು ಶಿವಮೊಗ್ಗ-ತೀರ್ಥಹಳ್ಳಿ-ಶೃಂಗೇರಿ-ಮಂಗಳೂರು ಹಾಗೂ ಚಿಕ್ಕಮಗಳೂರು ಮಾರ್ಗದ ಸಮೀಕ್ಷೆಯನ್ನು ವೇಗಗೊಳಿಸಬೇಕು.
ಶಿವಮೊಗ್ಗ ಹೊರವಲಯದ ಕೋಟೆಗಂಗೂರು ಕೋಚಿಂಗ್ ಟರ್ಮಿನಲ್‌ನ 2ನೇ ಹಂತದ ಕಾಮಗಾರಿಗೆ ತಕ್ಷಣ ಅನುಮೋದನೆ ನೀಡಬೇಕು. ಅಲ್ಲಿ ಎರಡನೇ ಪೂರ್ಣ ಪ್ರಮಾಣದ ಪಿಟ್ ಲೈನ್ ಹಾಗೂ ಸ್ವಯಂಚಾಲಿತ ಕೋಚ್ ವಾಷಿಂಗ್ ಪ್ಲಾಂಟ್ ಸ್ಥಾಪಿಸಬೇಕು. ಶಿವಮೊಗ್ಗದಿಂದ ವಂದೇ ಭಾರತ್ ರೈಲುಗಳ ಕಾರ್ಯಾಚರಣೆ ಆರಂಭಿಸಲು ಈ ಟರ್ಮಿನಲ್ ಅತ್ಯಗತ್ಯ ಎಂದು ಅವರು ಒತ್ತಿ ಹೇಳಿದರು.
ಪ್ರಧಾನಿ ಮೋದಿಯವರ ‘ವಿಕಸಿತ ಭಾರತ’ ಸಂಕಲ್ಪಕ್ಕೆ ಪೂರಕವಾಗಿ ಶಿವಮೊಗ್ಗ ಜಿಲ್ಲೆಯು ಅಭಿವೃದ್ಧಿಯ ಪಥದಲ್ಲಿ ಸಾಗುತ್ತಿದೆ ಎಂದು ಸಂಸದರು ವಿಶ್ವಾಸ ವ್ಯಕ್ತಪಡಿಸಿದರು.
PublicNext
17/03/2026 02:27 pm
LOADING...