ವಿಜಯಪುರ : ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ಮುದ್ದೇಬಿಹಾಳ ಸೇರಿದಂತೆ ವಿವಿಧ ಕಡೆಗಳಲ್ಲಿ ಮಂಗಳವಾರ ಗುಡುಗು ಸಹಿತ ಮಳೆಯಾಗಿದೆ.
ಬಸವನಬಾಗೇವಾಡಿ ಪಟ್ಟಣದಲ್ಲಿ ಮಧ್ಯಾಹ್ನ 3 ಗಂಟೆ ಸುಮಾರಿಗೆ ಸಾಧಾರಣ ಮಳೆಯಾಗಿದ್ದು ನಂತರ 3,30 ರಿಂದ 4 ಗಂಟೆ ಸುಮಾರಿಗೆ ಆಲಿಕಲ್ಲು ಮಳೆಯಾಗಿದೆ. ಸಂಜೆ ಪಟ್ಟಣದಲ್ಲಿ ವಿಪರೀತ ಗಾಳಿ ಮಿಂಚು, ಗುಡುಗು ಸಾರ್ವಜನಿಕರಲ್ಲಿ ಆತಂಕ ಮೂಡುವಂತೆ ಮಾಡಿದೆ.
ಇನ್ನೂ ಮುದ್ದೇಬಿಹಾಳ ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಕೆಲ ಭಾಗದಲ್ಲಿ ಆಲಿಕಲ್ಲು ಮಳೆಯಾಗಿದ್ದು ಬಿಸಿಲಿನ ತಾಪಮಾನ ಹೆಚ್ಚಾಗಿದ್ದರೂ, ಸಂಜೆ ವೇಳೆಗೆ ಮೋಡ ಕವಿದು ಗುಡುಗು ಮಿಂಚಿನೊಂದಿಗೆ ಮಳೆ ಆರಂಭವಾಯಿತು. ಕೆಲವೇ ಕ್ಷಣಗಳಲ್ಲಿ ದೊಡ್ಡ ಪ್ರಮಾಣದ ಆಲಿಕಲ್ಲುಗಳು ಸುರಿದ ಕಾರಣ ರಸ್ತೆ, ಮನೆಗಳ ಮುಂಭಾಗ ಮತ್ತು ತೋಟಗಳಲ್ಲಿ ಹಿಮದಂತೆ ಕಲ್ಲುಗಳು ಹರಡಿಕೊಂಡಿದ್ದವು. ಸ್ಥಳೀಯರ ಪ್ರಕಾರ ಸುಮಾರು 10 ರಿಂದ 15 ನಿಮಿಷಗಳ ಕಾಲ ಆಲಿಕಲ್ಲು ಮಳೆ ಸುರಿದು, ಮರಗಳ ಎಲೆಗಳು ಹಾಗೂ ಸಣ್ಣ ಗಿಡಗಳಿಗೆ ಹಾನಿಯಾಗಿದೆ.
ಕೆಲವು ಕಡೆಗಳಲ್ಲಿ ನೀರು ನಿಂತು ಸಂಚಾರಕ್ಕೂ ಅಡಚಣೆ ಉಂಟಾಯಿತು. ಬೇಸಿಗೆ ಆರಂಭವಾಗಿರುವ ಸಮಯದಲ್ಲಿ ಇಂತಹ ಆಲಿಕಲ್ಲು ಮಳೆ ಸುರಿದಿರುವುದು ಅಪರೂಪದ ಘಟನೆ ಎನ್ನಲಾಗಿದೆ.
ಹವಾಮಾನ ಇಲಾಖೆ ಈಗಾಗಲೇ ರಾಜ್ಯದ ಹಲವು ಭಾಗಗಳಲ್ಲಿ ಗುಡುಗು-ಮಿಂಚು ಸಹಿತ ಮಳೆಯ ಸಾಧ್ಯತೆ ಇರುವುದಾಗಿ ಮುನ್ಸೂಚನೆ ನೀಡಿದ್ದು, ಈ ರೀತಿಯ ಆಕಸ್ಮಿಕ ಮಳೆಗಳು ಮುಂದಿನ ದಿನಗಳಲ್ಲಿ ಕೂಡ ಸಂಭವಿಸಬಹುದು ಎಂದು ಹೇಳಲಾಗಿದೆ. ಸದ್ಯ ಜಿಲ್ಲೆಯಲ್ಲಿ ಸ್ಥಳೀಯರು ಮೊಬೈಲ್‌ನಲ್ಲಿ ಆಲಿಕಲ್ಲು ಮಳೆಯ ದೃಶ್ಯಗಳನ್ನು ಸೆರೆಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ.
ಬಿಸಿಲಿನ ಪ್ರಖರತೆಗೆ ತತ್ತರಿಸಿದ್ದ ವಿಜಯಪುರ ಜಿಲ್ಲೆಯ ಜನತೆಗೆ ಕೂಲ್ ಕೂಲ್ ಅನುಭವವಾಗಿದ್ದು ಆಲಿಕಲ್ಲು ಮಳೆಯಿಂದ ತೋಟಗಾರಿಕಾ ಬೆಳೆಗಳಿಗೆ ಕಂಟಕವಾಗಿದೆ ಕೆಲವೆಡೆ ದ್ರಾಕ್ಷಿ ದಾಳಿಂಬೆ ಬೆಳೆಗೆ ಹಾನಿಯಾಗಿವೆ ಎನ್ನಲಾಗಿದೆ.
PublicNext
17/03/2026 10:22 pm