ದಾವಣಗೆರೆ : ಕಾಂಗ್ರೆಸ್‌ನ ಅತ್ಯಂತ ಹಿರಿಯ ಶಾಸಕರೆನ್ನಿಸಿದ್ದ ಮಾಜಿ ಸಚಿವರೂ ಆಗಿದ್ದ ಶಾಮನೂರು ಶಿವಶಂಕರಪ್ಪ ಅವರ ನಿಧನದ ಬಳಿಕ ತೆರವಾದ ದಾವಣಗೆರೆ ದಕ್ಷಿಣ ವಿಧಾನಸಭೆ ಉಪ ಚುನಾವಣೆಯ ಟಿಕೆಟ್ ವಿಚಾರ "ಕೈ' ಸುಡುವಂತಾಗಿದೆ.
ಶಾಮನೂರು ಶಿವಶಂಕರಪ್ಪ ಅವರ ಮೊಮ್ಮಗ ಮತ್ತು ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಅವರ ಪುತ್ರ "ಸಮರ್ಥ್' ಅವರ ಹೆಸರು ಕೇಳಿ ಬಂದಿದೆಯಾದ್ರೂ, ಈ ಬಾರಿ ಅಲ್ಪಸಂಖ್ಯಾತ ಸಮುದಾಯದ ವ್ಯಕ್ತಿಗೆ ದಾವಣಗೆರೆ ದಕ್ಷಿಣ ಉಪ ಚುನಾವಣೆಗೆ ಟಿಕೆಟ್ ನೀಡಬೇಕು ಎಂಬ ಅಭಿಪ್ರಾಯವೂ ಕೇಳಿ ಬಂದಿದ್ದು, ಗೊಂದಲವೇರ್ಪಟ್ಟಿದೆ.
ದಾವಣಗೆರೆ ದಕ್ಷಿಣ ಕ್ಷೇತ್ರದ ಟಿಕೆಟ್ ನೀಡುವ ಸಂಬಂಧ ನಿನ್ನೆ ದಾವಣಗೆರೆ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸ್ಥಳೀಯ ಮುಖಂಡರೊಂದಿಗೆ ಬೆಂಗಳೂರಿನಿಂದ ಆಗಮಿಸಿದ್ದ ' ಕಾಂಗ್ರೆಸ್ ಅಭ್ಯರ್ಥಿ ಆಯ್ಕೆ ಸಮಿತಿ' ನಡೆಸಿದ ಸಭೆ ಒಮ್ಮತಕ್ಕೆ ಬರುವಲ್ಲಿ ವಿಫಲವಾಗಿದ್ದು, 2-3 ಬಣಗಳ ನಡುವೆ ಗದ್ದಲ ಉಂಟಾಗಿ ಪೊಲೀಸರು ಮಧ್ಯೆ ಪ್ರವೇಶಿಸುವಂತಾಗಿತ್ತು ಎಂದು ಕಾಂಗ್ರೆಸ್ ನ ಮೂಲಗಳು ತಿಳಿಸಿವೆ.
ಮುಸ್ಲಿಂ ಸಮುದಾಯದ ಮುಖಂಡರು ಈ ಬಾರಿ ನಮ್ಮ ಸಮುದಾಯದ ಅಭ್ಯರ್ಥಿಗೆ ಟಿಕೆಟ್ ನೀಡಬೇಕು. ತಪ್ಪಿದರೆ, 2028ರ ವಿಧಾನಸಭೆ ಚುನಾವಣೆಯಲ್ಲಿ ಎಸ್.ಎಸ್.ಮಲ್ಲಿಕಾರ್ಜುನ ಅವರನ್ನು ಐವತ್ತು ಸಾವಿರ ಮತಗಳ ಅಂತರದಿಂದ ಸೋಲಿಸಿ ಸೇಡು ತೀರಿಸಿಕೊಳ್ಳುತ್ತೇವೆಂದು ಬಹಿರಂಗವಾಗಿ ಸವಾಲು ಹಾಕಿದರೆ, ಮತ್ತೊಂದು ಬಣ ಸಚಿವ ಮಲ್ಲಿಕಾರ್ಜುನ ಅವರ ಮಗ 'ಸಮರ್ಥ್' ಅವರೇ ನಮ್ಮ ಅಭ್ಯರ್ಥಿ ಎಂದು ಘೋಷಣೆ ಕೂಗಿದ ಪ್ರಸಂಗ ನಡೆದಿದೆ.
ಈ ಸಂದರ್ಭದಲ್ಲಿ ಉಸ್ತುವಾರಿ ಸಮಿತಿ ಮಂಜುನಾಥ್ ಭಂಡಾರಿ, ಹೆಚ್.ಎಂ.ರೇವಣ್ಣ, ಹೆಚ್.ಆಂಜನೇಯ, ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಅವರು ಅಸಹಾಯಕತೆಯಿಂದ ಕೂರುವಂತಾಗಿತ್ತು ಎಂದು ಹೇಳಲಾಗುತ್ತೆ. ಆದರೆ, ಹೆಚ್.ಎಂ.ರೇವಣ್ಣ ಅವರು ಗದ್ದಲ ಎಬ್ಬಿಸಿದ ದಾವಣಗೆರೆ ಅಲ್ಪಸಂಖ್ಯಾತ ಸ್ಥಳೀಯ ಮುಖಂಡರ ವರ್ತನೆಗೆ ಕಿಡಿ ಕಾರಿದರೆಂದು ತಿಳಿದು ಬಂದಿದೆ.
PublicNext
18/03/2026 03:16 pm