ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸಕಲೇಶಪುರ: ಬೆಟ್ಟದ ಬೈರವೇಶ್ವರ ಸನ್ನಿಧಿಯಲ್ಲಿ ಪುಂಡರ ಅಟ್ಟಹಾಸ; ಛಾಯಾಗ್ರಾಹಕರ ಮೇಲೆ ಹಲ್ಲೆ

ಸಕಲೇಶಪುರ: ತಾಲ್ಲೂಕಿನ ಸುಂದರ ಪ್ರವಾಸಿ ತಾಣ ಹಾಗೂ ಐತಿಹಾಸಿಕ ಹಿನ್ನೆಲೆಯುಳ್ಳ ಬೆಟ್ಟದ ಬೈರವೇಶ್ವರ ದೇಗುಲದ ಆವರಣದಲ್ಲಿ ಸ್ಥಳೀಯ ಪುಂಡರ ಗೂಂಡಾಗಿರಿ ಮಿತಿ ಮೀರಿದ್ದು, ಎಂದಿನಂತೆ ಫೋಟೋ ಹಾಗೂ ವಿಡಿಯೋ ಶೂಟ್ ಮಾಡುತ್ತಿದ್ದ ವೃತ್ತಿಪರ ಛಾಯಾಗ್ರಾಹಕರ ಮೇಲೆ ಭೀಕರ ಹಲ್ಲೆ ನಡೆಸಲಾಗಿದೆ. ಈ ಘಟನೆಯಿಂದಾಗಿ ಪ್ರವಾಸಿಗರು ಆತಂಕಕ್ಕೊಳಗಾಗಿದ್ದು, ಸಾರ್ವಜನಿಕ ವಲಯದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

ಪ್ರಕೃತಿ ಸೌಂದರ್ಯಕ್ಕೆ ಹೆಸರಾದ ಬೆಟ್ಟದ ಬೈರವೇಶ್ವರ ದೇಗುಲದ ಬಳಿ ಪ್ರವಾಸಿಗರು ನೆನಪಿಗಾಗಿ ಫೋಟೋ ಹಾಗೂ ವಿಡಿಯೋ ಶೂಟ್ ಮಾಡಿಸಿಕೊಳ್ಳುವುದು ಸಾಮಾನ್ಯ. ಅದರಂತೆ ಇಂದು ಫೋಟೋಗ್ರಾಫರ್‌ಗಳು ತಮ್ಮ ಕಾರ್ಯದಲ್ಲಿ ತೊಡಗಿದ್ದಾಗ, ಅಲ್ಲಿಗೆ ಬಂದ ಸ್ಥಳೀಯ ಪುಂಡರ ತಂಡವೊಂದು ಯಾವುದೇ ಕಾರಣವಿಲ್ಲದೆ ಕ್ಯಾಮೆರಾಮನ್‌ಗಳ ಮೇಲೆ ದೌರ್ಜನ್ಯ ಎಸಗಿದೆ. ಕ್ಷುಲ್ಲಕ ಕಾರಣಕ್ಕೆ ಆರಂಭವಾದ ಗಲಾಟೆ ವಿಕೋಪಕ್ಕೆ ಹೋಗಿದ್ದು, ಛಾಯಾಗ್ರಾಹಕರ ಮೇಲೆ ಹಲ್ಲೆ ನಡೆಸಲಾಗಿದೆ.

ಪುಂಡರ ಅಟ್ಟಹಾಸಕ್ಕೆ ಸಿಲುಕಿದ ಛಾಯಾಗ್ರಾಹಕರು ತೀವ್ರವಾಗಿ ಗಾಯಗೊಂಡಿದ್ದು, ಕೂಡಲೇ ಅವರನ್ನು ಚಿಕಿತ್ಸೆಗಾಗಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. "ನಮ್ಮ ಹೊಟ್ಟೆಪಾಡಿಗಾಗಿ ನಾವು ಕೆಲಸ ಮಾಡುತ್ತಿದ್ದೇವೆ. ಆದರೆ, ಸ್ಥಳೀಯ ಕೆಲವರು ಪದೇ ಪದೇ ನಮ್ಮ ಮೇಲೆ ದೌರ್ಜನ್ಯ ನಡೆಸುತ್ತಿದ್ದಾರೆ" ಎಂದು ಸಂತ್ರಸ್ತರು ಅಳಲು ತೋಡಿಕೊಂಡಿದ್ದಾರೆ.

Edited By : Shivu K
PublicNext

PublicNext

27/03/2026 05:02 pm

Cinque Terre

12.44 K

Cinque Terre

0