ಸಕಲೇಶಪುರ: ತಾಲ್ಲೂಕಿನ ಪ್ರವಾಸಿ ತಾಣವಾದ ಬೆಟ್ಟದ ಭೈರವೇಶ್ವರ ಪ್ರದೇಶದಲ್ಲಿ ನಡೆದ ಚಿತ್ರೀಕರಣದ ವೇಳೆ ಕೆಲವರು ಹಲ್ಲೆ ನಡೆಸಿದ ಘಟನೆ ಕುರಿತು ಸಾಮಾಜಿಕ ಹೋರಾಟಗಾರ ಹಾಗೂ ಕೆಪಿಸಿಸಿ ಸದಸ್ಯ ಯಡೇಹಳ್ಳಿ ಆರ್. ಮಂಜುನಾಥ್ ಅವರು ವಿಷಾದ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿದ ಅವರು, “ಸಕಲೇಶಪುರವು ಕರ್ನಾಟಕ ರಾಜ್ಯದಲ್ಲೇ ‘ಬಡವರ ಊಟಿ’ ಎಂದೇ ಪ್ರಸಿದ್ಧಿ ಪಡೆದಿರುವ ಸುಂದರ ಪ್ರವಾಸಿ ಕ್ಷೇತ್ರ. ಇಲ್ಲಿ ದೇಶದ ವಿವಿಧ ಭಾಗಗಳಿಂದ ಪ್ರವಾಸಿಗರು ಹಾಗೂ ಕಲಾವಿದರು ಆಗಮಿಸುತ್ತಾರೆ. ಪ್ರವಾಸಿಗರ ಆಗಮನದಿಂದ ಸ್ಥಳೀಯ ಆರ್ಥಿಕತೆ ಮತ್ತು ಪ್ರವಾಸೋದ್ಯಮ ಅಭಿವೃದ್ಧಿಯಾಗುತ್ತದೆ. ಆದ್ದರಿಂದ ಹೊರಗಿನಿಂದ ಬರುವ ಅತಿಥಿಗಳನ್ನು ಗೌರವಪೂರ್ವಕವಾಗಿ ಸ್ವಾಗತಿಸುವುದು ನಮ್ಮೆಲ್ಲರ ಕರ್ತವ್ಯ” ಎಂದು ಹೇಳಿದರು.
ಯಾರಾದರೂ ಹೊರಗಿನಿಂದ ಬಂದವರಿಂದ ಸ್ಥಳೀಯರಿಗೆ ತೊಂದರೆ ಉಂಟಾದರೆ ಅದನ್ನು ಕಾನೂನುಬದ್ಧವಾಗಿ ಪರಿಹರಿಸಬೇಕು. ಅದಕ್ಕಾಗಿ ತಕ್ಷಣ ಪೊಲೀಸರಿಗೆ ಮಾಹಿತಿ ನೀಡುವುದರ ಜೊತೆಗೆ ಊರಿನ ಹಿರಿಯ ಮುಖಂಡರಿಗೆ ತಿಳಿಸುವುದು ಉತ್ತಮ ಮಾರ್ಗ ಎಂದು ಅವರು ಸಲಹೆ ನೀಡಿದರು.
ಇನ್ನು ಮುಂದೆ ಇಂತಹ ಅಹಿತಕರ ಘಟನೆಗಳು ಮರುಕಳಿಸದಂತೆ ಎಲ್ಲರೂ ಎಚ್ಚೆತ್ತುಕೊಂಡು ನಡೆದುಕೊಳ್ಳಬೇಕು. ನಮ್ಮ ಊರಿನ ಉತ್ತಮ ಹೆಸರು ಮತ್ತು ಸಂಸ್ಕೃತಿಗೆ ಕಳಂಕ ಬರುವ ರೀತಿಯಲ್ಲಿ ಯಾವುದೇ ಘಟನೆ ನಡೆಯದಂತೆ ಜನರು ಸಹಕಾರ ನೀಡಬೇಕು ಎಂದು ಅವರು ಮನವಿ ಮಾಡಿದರು.
ಸಕಲೇಶಪುರದಂತಹ ಸುಂದರ ಪ್ರವಾಸಿ ಕ್ಷೇತ್ರದ ಗೌರವ ಮತ್ತು ಖ್ಯಾತಿಯನ್ನು ಉಳಿಸುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ. ಸ್ಥಳೀಯರು ಪರಸ್ಪರ ಸಹಕಾರದಿಂದ ಶಾಂತಿ, ಸೌಹಾರ್ದತೆ ಮತ್ತು ಗೌರವದೊಂದಿಗೆ ಒಂದಾಗಿ ಬದುಕಬೇಕು ಎಂದು ಯಡೇಹಳ್ಳಿ ಆರ್. ಮಂಜುನಾಥ್ ಅವರು ಕರೆ ನೀಡಿದರು.
PublicNext
28/03/2026 01:20 pm