ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹಾವೇರಿ ವಿವಿ ಘಟಿಕೋತ್ಸವ: ಸ್ವಂತ ಆವರಣ ಬಿಟ್ಟು ಖಾಸಗಿ ಕಾಲೇಜೇಕೆ? ಜನರ ಆಕ್ರೋಶ!

ಹಾವೇರಿ: ಮೂರು ವರ್ಷಗಳ ಹಿಂದೆ ಸ್ಥಾಪನೆಯಾದ ಹಾವೇರಿ ವಿಶ್ವವಿದ್ಯಾಲಯದ ಮೊದಲ ಘಟಿಕೋತ್ಸವ ಇದೇ ಏಪ್ರಿಲ್ 6 ರಂದು ನಡೆಯಲಿದೆ. ಆದರೆ, ವಿಶ್ವವಿದ್ಯಾಲಯದ ಸ್ವಂತ 42 ಎಕರೆ ಆವರಣವಿದ್ದರೂ, ಘಟಿಕೋತ್ಸವವನ್ನು ಹಾವೇರಿ ನಗರದ ಖಾಸಗಿ ಜೆ.ಎಚ್. ಮಹಾವಿದ್ಯಾಲಯದಲ್ಲಿ ನಡೆಸಲು ಸಿದ್ಧತೆ ನಡೆಸಿರುವುದಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗಿದೆ. ಕೆರೆ ಮತ್ತಿಹಳ್ಳಿ ಗ್ರಾಮದಲ್ಲಿರುವ ವಿಶಾಲವಾದ ವಿಶ್ವವಿದ್ಯಾಲಯದ ಆವರಣವನ್ನು ಬಿಟ್ಟು ಖಾಸಗಿ ಕಾಲೇಜಿನಲ್ಲಿ ಈ ಮಹತ್ವದ ಕಾರ್ಯಕ್ರಮವನ್ನು ಆಯೋಜಿಸಿರುವುದು ಜಿಲ್ಲೆಯ ಜನರ ಆಕ್ರೋಶಕ್ಕೆ ಕಾರಣವಾಗಿದೆ.

ವಿವಿ ಸ್ಥಾಪನೆಗೆ ಸಮುದಾಯದ ಕೊಡುಗೆ

ಹಾವೇರಿ ಜಿಲ್ಲೆಗೆ ವಿಶ್ವವಿದ್ಯಾಲಯ ತರಲು ಹತ್ತಾರು ಸಂಘಟನೆಗಳು, ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಮಾಧ್ಯಮದವರು ಬಹು ಮುಖ್ಯ ಪಾತ್ರ ವಹಿಸಿದ್ದರು. ಎಲ್ಲರ ನಿರಂತರ ಹೋರಾಟದ ಫಲವಾಗಿ ಸರ್ಕಾರ ಈ ವಿಶ್ವವಿದ್ಯಾಲಯವನ್ನು ಮಂಜೂರು ಮಾಡಿದೆ. ಇದು ಜಿಲ್ಲೆಯ ಜನರ ಬಹುದಿನಗಳ ಕನಸಾಗಿತ್ತು ಮತ್ತು ಸಮುದಾಯದ ಸಾಮೂಹಿಕ ಪ್ರಯತ್ನದ ಪ್ರತೀಕವಾಗಿದೆ.

ವಿರೋಧ ಘಟಿಕೋತ್ಸವಕ್ಕಲ್ಲ, ಸ್ಥಳಕ್ಕೆ

ಕಳೆದ ಮೂರು ವರ್ಷಗಳಲ್ಲಿ ಸ್ನಾತಕೋತ್ತರ ಪದವಿ ಮುಗಿಸಿ ಸಾಧನೆ ಮಾಡಿದ ವಿದ್ಯಾರ್ಥಿಗಳು ಘಟಿಕೋತ್ಸವ ಸಮಾರಂಭದಲ್ಲಿ ತಮ್ಮ ಪದವಿ ಹಾಗೂ ಚಿನ್ನದ ಪದಕಗಳನ್ನು ಪಡೆಯುವ ಕನಸು ಕಾಣುತ್ತಿದ್ದಾರೆ. ಜಿಲ್ಲೆಯ ಜನರಿಗೆ ಘಟಿಕೋತ್ಸವ ಆಯೋಜನೆಯ ಬಗ್ಗೆ ಯಾವುದೇ ವಿರೋಧವಿಲ್ಲ. ಬದಲಾಗಿ, ಈ ಮಹತ್ವದ ಕಾರ್ಯಕ್ರಮವು ವಿಶ್ವವಿದ್ಯಾಲಯದ ಸ್ವಂತ ಆವರಣದಲ್ಲೇ ನಡೆಯಬೇಕು ಎಂಬುದು ಜನರ ಮತ್ತು ವಿದ್ಯಾರ್ಥಿಗಳ ಪ್ರಮುಖ ಒತ್ತಾಯವಾಗಿದೆ.

ಆಮಂತ್ರಣ ಪತ್ರದಲ್ಲಿ ಖಾಸಗಿ ಕಾಲೇಜು

ಈ ಎಲ್ಲ ಒತ್ತಾಯಗಳನ್ನು ಕಡೆಗಣಿಸಿ, ಈಗಾಗಲೇ ಆಮಂತ್ರಣ ಪತ್ರಗಳನ್ನು ಸಿದ್ಧಪಡಿಸಿ, ಅದರಲ್ಲಿ ಹಾವೇರಿಯ ಜೆ.ಎಚ್. ಖಾಸಗಿ ಕಾಲೇಜನ್ನು ಕಾರ್ಯಕ್ರಮದ ಸ್ಥಳವಾಗಿ ನಮೂದಿಸಿರುವುದು ಜಿಲ್ಲೆಯ ಜನರ ಕೆಂಗಣ್ಣಿಗೆ ಗುರಿಯಾಗಿದೆ. ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಕೂಡಾ ಈ ನಿರ್ಧಾರದ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ. ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್‌ಎಫ್‌ಐ) ಕೂಡ ಘಟಿಕೋತ್ಸವವನ್ನು ವಿಶ್ವವಿದ್ಯಾಲಯದ ಆವರಣದಲ್ಲೇ ನಡೆಸಬೇಕೆಂದು ಮನವಿ ಸಲ್ಲಿಸಿದೆ.

ಲೋಕೇಶ್ ಸುಣಗಾರ್ ಪಬ್ಲಿಕ್ ನೆಕ್ಸ್ಟ್

Edited By : Vinayak Patil
Kshetra Samachara

Kshetra Samachara

29/03/2026 02:47 pm

Cinque Terre

10 K

Cinque Terre

0