ಶಿವಮೊಗ್ಗ : ಅವರಿಬ್ಬರೂ ನೂರಾರು ಕನಸು ಕಂಡಿದ್ದರು. ಸುಂದರ ಸಂಸಾರ ನಡೆಸುವ ಆಸೆಯಿಂದ ಕಷ್ಟಪಟ್ಟು ಜೊತೆಯಾಗಿ ದುಡಿಯುತ್ತಿದ್ದರು. ದಾಂಪತ್ಯ ಜೀವನಕ್ಕೆ ಕಾಲಿಟ್ಟು ಇನ್ನೇನು 6 ತಿಂಗಳಷ್ಟೇ ಕಳೆದಿತ್ತು. ಆದರೆ ಅಷ್ಟರಲ್ಲೇ ಅವರ ಬಾಳಲ್ಲಿ ವಿಧಿ ಆಟವಾಡಿದೆ. ಕೆಲಸ ಮುಗಿಸಿ ಹೊರಟವರು ಮನೆ ಸೇರುವ ಬದಲು ಮಸಣ ಸೇರಿದ್ದಾರೆ. ಲಾರಿಯೊಂದು ಅವರ ಪಾಲಿಗೆ ಜವರಾಯನಾಗಿದ್ದಾನೆ.
ಹೌದು, ಲೋಡ್ ತುಂಬಿದ್ದ ಲಾರಿಯೊಂದು ಬೈಕ್‌ಗೆ ಡಿಕ್ಕಿಯಾಗಿ ನವ ದಂಪತಿ ಸ್ಥಳದಲ್ಲೇ ದುರ್ಮರಣ ಹೊಂದಿದ್ದಾರೆ ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಬಿಆರ್ಪಿ ಬಳಿ ಘಟನೆ ನಡೆದಿದೆ. ಬೈಕ್ನಲ್ಲಿದ್ದ ತರೀಕೆರೆ ಮೂಲದ ಬಾಬು(30), ಸಾವಿತ್ರಿ(26) ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಇವರಿಬ್ಬರೂ ಪ್ರೀತಿಸಿ ಮದುವೆಯಾಗಿ ಹೊಸ ಜೀವನ ಕಟ್ಟಿಕೊಂಡಿದ್ದರು. ಕೂಲಿ ಕೆಲಸ ಮುಗಿಸಿ ಊರಿಗೆ ಹೋಗುತ್ತಿದ್ದಾಗ ಅಪಘಾತ ನಡೆದಿದೆ. ಇವರ ಮದುವೆ ಆಗಿ ಕೇವಲ ಆರು ತಿಂಗಳಾಗಿತ್ತು. ಬಾಳಿ ಬದುಕಬೇಕಿದ್ದ ಜೋಡಿ ಅಪಘಾತದಲ್ಲಿ ಸಾವನ್ನಪ್ಪಿದ್ದು ಮೃತರನ್ನು ಕಂಡು ಕುಟುಂಬಸ್ಥರು ಕಣ್ಣೀರಿಟ್ಟಿದ್ದಾರೆ.
ಇನ್ನು ಮೃತದೇಹವನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ರವಾನೆ ಮಾಡಲಾಗಿತ್ತು ಸ್ಥಳಕ್ಕೆ ಭದ್ರಾವತಿ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇನ್ನು ಲಾರಿ ಚಾಲಕ ಪರಾರಿಯಾಗಿದ್ದು ಆತನಿಗಾಗಿ ಪೊಲೀಸರು ಶೋಧ ಆರಂಭಿಸಿದ್ದಾರೆ. ಇವರು ಬಡ ಕುಟುಂಬದವರಾಗಿದ್ದು ಕುಟುಂಬಸ್ಥರಿಗೆ ಸೂಕ್ತ ಪರಿಹಾರ ಒದಗಿಸಬೇಕೆಂದು ಸಂಬಂಧಿಕರು ಒತ್ತಾಯಿಸಿದ್ದಾರೆ.
ಒಟ್ಟಾರೆ, ಪ್ರೀತಿಸಿ ಮದುವೆಯಾಗಿ ನೆಮ್ಮದಿ ಜೀವನ ನಡೆಸುತ್ತಿದ್ದ ಜೋಡಿ ಅಪಘಾತದಲ್ಲಿ ಸಾವನ್ನಪ್ಪಿರುವುದು ನಿಜಕ್ಕೂ ಬೇಸರ ಸಂಗತಿ..
ವೀರೇಶ್ ಜಿ ಹೊಸೂರು, ಪಬ್ಲಿಕ್ ನೆಕ್ಸ್ಟ್, ಶಿವಮೊಗ್ಗ
PublicNext
30/03/2026 06:02 pm