ಶಿವಮೊಗ್ಗ: ನಗರದ ಸೇಕ್ರೆಡ್ ಹಾರ್ಟ್ ಚರ್ಚ್ ಆವರಣದಲ್ಲಿ ಗುಡ್ ಫ್ರೈಡೇ ಅಂಗವಾಗಿ ನಡೆಯುತ್ತಿದ್ದ ಪ್ರಾರ್ಥನೆ ವೇಳೆ ಜೇನುನೊಣಗಳ ದಾಳಿ ಸಂಭವಿಸಿ ನೂರಾರು ಭಕ್ತರು ಗಾಯಗೊಂಡ ಘಟನೆ ಇಂದು ನಡೆದಿದೆ.
ಗುಡ್ ಫ್ರೈಡೇ ಪ್ರಯುಕ್ತ ಚರ್ಚ್‌ನಲ್ಲಿ ಶಿಲುಬೆ ಹಾದಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಸಾವಿರಾರು ಭಕ್ತರು ಚರ್ಚ್ ಆವರಣದಲ್ಲಿ ಸೇರಿದ್ದರು. ಇದೇ ಸಮಯದಲ್ಲಿ ಏಕಾಏಕಿ ಜೇನುನೊಣಗಳು ದಾಳಿ ನಡೆಸಿದ್ದು, ಭಕ್ತರಲ್ಲಿ ಆತಂಕ ಉಂಟಾಯಿತು.
ದಾಳಿಯಿಂದ ಪಾರಾಗಲು ಹಲವರು ಚರ್ಚ್ ಒಳಗೆ ಸೇರಿ ಬಾಗಿಲು ಮುಚ್ಚಿಕೊಂಡರು. ಆದರೂ ಅಷ್ಟರಲ್ಲಾಗಲೇ ನೂರಾರು ಮಂದಿಗೆ ಜೇನುನೊಣಗಳು ಕಚ್ಚಿದ್ದರಿಂದ ಗಾಯಗಳಾಗಿವೆ. ಗಾಯಗೊಂಡವರನ್ನು ತಕ್ಷಣವೇ ಆ್ಯಂಬುಲೆನ್ಸ್ ಮೂಲಕ ಸಮೀಪದ ಅಶೋಕ ಸಂಜೀವಿನ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.
ಜೇನುನೊಣಗಳನ್ನು ಓಡಿಸಲು ಹೊಗೆ ಹಾಕುವ ಮೂಲಕ ಪ್ರಯತ್ನ ನಡೆಸಲಾಯಿತು. ಚರ್ಚ್‌ನ ಫಾದರ್ ಸೇರಿದಂತೆ ಹಲವರು ದಾಳಿಗೆ ಒಳಗಾದರು ಎಂದು ತಿಳಿದುಬಂದಿದೆ.
ಇತ್ತೀಚೆಗೆ ಚರ್ಚ್ ಆವರಣದಲ್ಲಿರುವ ಮರಗಳಲ್ಲಿ ಜೇನುನೊಣಗಳು ಗೂಡು ಕಟ್ಟಿದ್ದವು. ಹಬ್ಬದ ಹಿನ್ನೆಲೆಯಲ್ಲಿ ಅವುಗಳನ್ನು ತೆರವುಗೊಳಿಸಲಾಗಿತ್ತು ಎನ್ನಲಾಗಿದ್ದು, ಇದರಿಂದ ಜೇನುನೊಣ ದಾಳಿ ಮಾಡಿರಬಹುದು.
ಘಟನೆಯ ಪರಿಣಾಮ ಶಿಲುಬೆ ಹಾದಿ ಕಾರ್ಯಕ್ರಮ ಅರ್ಧದಲ್ಲೇ ಸ್ಥಗಿತಗೊಂಡಿತು. ಆದರೂ ಬಳಿಕ ಭಕ್ತರು ಪ್ರಾರ್ಥನೆಯನ್ನು ಪೂರ್ಣಗೊಳಿಸಿದರು.
PublicNext
03/04/2026 08:37 pm
LOADING...