ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಶಿವಮೊಗ್ಗ : ಕೊಳವೆ ಬಾವಿ ಲಂಚ ಪ್ರಕರಣ: ಅಧಿಕಾರಿಗೆ 2 ವರ್ಷ ಜೈಲು, 40 ಸಾವಿರ ದಂಡ!

ಶಿವಮೊಗ್ಗ: ಗಂಗಾ ಕಲ್ಯಾಣ ಯೋಜನೆಯಡಿ ಕೊಳವೆ ಬಾವಿ ಕೊರೆಯಿಸಿಕೊಡಲು ಲಂಚ ಪಡೆದಿದ್ದ ಆರೋಪದಡಿ, ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಅಂದಿನ ಜಿಲ್ಲಾ ವ್ಯವಸ್ಥಾಪಕ ಆರ್.ಎಸ್. ಪರಮೇಶ್ವರಪ್ಪ ಅವರಿಗೆ ಶಿವಮೊಗ್ಗದ ವಿಶೇಷ ನ್ಯಾಯಾಲಯವು ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿ ತೀರ್ಪು ನೀಡಿದೆ. ಲಂಚ ಪ್ರಕರಣದಲ್ಲಿ ತಪ್ಪಿತಸ್ಥರೆಂದು ಸಾಬೀತಾದ ಪರಮೇಶ್ವರಪ್ಪ ಅವರಿಗೆ 2 ವರ್ಷ ಜೈಲು ಶಿಕ್ಷೆ ಹಾಗೂ 40,000 ರೂ. ದಂಡ ವಿಧಿಸಲಾಗಿದೆ.

ಪ್ರಕರಣದ ವಿವರ

ಸಾಗರ ತಾಲೂಕಿನ ಹೊಸಗುಂದ ಗ್ರಾಮದ ನಿವಾಸಿ ಹೆಚ್.ಎಸ್. ಜನಾರ್ಧನ ಅವರು ತಮ್ಮ ಜಮೀನಿನಲ್ಲಿ ಕೊಳವೆ ಬಾವಿ ಕೊರೆಯಿಸಲು ಗಂಗಾ ಕಲ್ಯಾಣ ಯೋಜನೆಯಡಿ ಅರ್ಜಿ ಸಲ್ಲಿಸಿದ್ದರು. ಈ ಕೆಲಸ ಮಾಡಿಕೊಡಲು ಅಂದಿನ ಜಿಲ್ಲಾ ವ್ಯವಸ್ಥಾಪಕ ಆರ್.ಎಸ್. ಪರಮೇಶ್ವರಪ್ಪ ಅವರು ಜನಾರ್ಧನ ಅವರಿಂದ ಲಂಚಕ್ಕೆ ಬೇಡಿಕೆಯಿಟ್ಟಿದ್ದರು.

ಬಲೆಗೆ ಬಿದ್ದ ಅಧಿಕಾರಿ

ಅಧಿಕಾರಿಯ ಲಂಚದ ಬೇಡಿಕೆಯಿಂದ ಬೇಸತ್ತ ಜನಾರ್ಧನ ಅವರು ಈ ಕುರಿತು ಭ್ರಷ್ಟಾಚಾರ ನಿಗ್ರಹ ದಳ (ಎ.ಸಿ.ಬಿ)ಕ್ಕೆ ದೂರು ನೀಡಿದ್ದರು. ದೂರಿನ ಅನ್ವಯ ಕಾರ್ಯಾಚರಣೆ ನಡೆಸಿದ ಎ.ಸಿ.ಬಿ ಅಧಿಕಾರಿಗಳು, 2017ರ ಜುಲೈ 13ರಂದು ಕಚೇರಿಯಲ್ಲಿ 10,000 ರೂಪಾಯಿ ಲಂಚ ಪಡೆಯುತ್ತಿದ್ದಾಗ ಆರ್.ಎಸ್. ಪರಮೇಶ್ವರಪ್ಪ ಅವರನ್ನು ರೆಡ್‌ಹ್ಯಾಂಡ್ ಆಗಿ ಬಂಧಿಸಿದ್ದರು.

ಶಿಕ್ಷೆ ಮತ್ತು ದಂಡ

ಪ್ರಕರಣದ ತನಿಖೆ ನಡೆಸಿದ ಅಂದಿನ ಎ.ಸಿ.ಬಿ ಪೊಲೀಸ್ ಉಪಾಧೀಕ್ಷಕ ಎ.ಚಂದ್ರಪ್ಪ ಅವರು ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಶಿವಮೊಗ್ಗದ ಜಿಲ್ಲಾ ಮತ್ತು ಸತ್ರ ಹಾಗೂ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ಅಭಯ್ ಧನಪಾಲ್‌ ಚೌಗಲ ಅವರು ಪ್ರಕರಣದ ವಿಚಾರಣೆ ನಡೆಸಿ, ಆರೋಪಗಳು ಸಾಬೀತಾದ ಹಿನ್ನೆಲೆಯಲ್ಲಿ ಆರ್.ಎಸ್. ಪರಮೇಶ್ವರಪ್ಪ ಅವರಿಗೆ 2 ವರ್ಷ ಕಠಿಣ ಜೈಲು ಶಿಕ್ಷೆ ಹಾಗೂ 40,000 ರೂಪಾಯಿ ದಂಡ ವಿಧಿಸಿ ತೀರ್ಪು ನೀಡಿದರು. ಸರ್ಕಾರದ ಪರವಾಗಿ ವಿಶೇಷ ಸಾರ್ವಜನಿಕ ಅಭಿಯೋಜಕ ಎಂ.ಡಿ.ಸುಂದರ್‌ ರಾಜ್‌ ಅವರು ವಾದ ಮಂಡಿಸಿದ್ದರು.

Edited By : PublicNext Desk
PublicNext

PublicNext

02/04/2026 10:36 pm

Cinque Terre

6.45 K

Cinque Terre

0

ಸಂಬಂಧಿತ ಸುದ್ದಿ