ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ರೂಟ್‌ಟಾಪ್ ಕೆಫೆ ಹತ್ಯೆ ಪ್ರಕರಣ: ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಲು ಡಿವೈಎಸ್‌ಪಿ ಕಚೇರಿ ಎದುರು ಆಗ್ರಹ

ಸಾಗರ: ನಗರದ ಶಿವಮೊಗ್ಗ ರಸ್ತೆಯ ರೂಟ್‌ಟಾಪ್ ಕೆಫೆಯಲ್ಲಿ ಗುರುವಾರ ಬಿಹಾರಿ ಮೂಲದ ಕಾರ್ಮಿಕ ಟಿಂಕೂ ಶರ್ಮನನ್ನು ಬರ್ಬರವಾಗಿ ಹತ್ಯೆ ಮಾಡಿರುವುದನ್ನು ಖಂಡಿಸಿ, ಆರೋಪಿಗಳ ವಿರುದ್ಧ ಕಠಿಣ ಕಾನೂನು ಕ್ರಮಕ್ಕೆ ಒತ್ತಾಯಿಸಿ ಶುಕ್ರವಾರ ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳ ವತಿಯಿಂದ ಡಿವೈಎಸ್‌ಪಿ ಕಚೇರಿ ಎದುರು ಬೃಹತ್ ಪ್ರತಿಭಟನೆ ನಡೆಸಲಾಯಿತು.

ಮಾಧ್ಯಮಗಳೊಂದಿಗೆ ಮಾತನಾಡಿದ ಬಜರಂಗದಳದ ಜಿಲ್ಲಾ ಸಂಯೋಜಕ ಸಂತೋಷ್ ಶಿವಾಜಿ, "ರೂಟ್‌ಟಾಪ್ ಕೆಫೆಯಲ್ಲಿ ಕೆಲಸಕ್ಕಿದ್ದ ಯುವಕ ಟಿಂಕೂ ಶರ್ಮನನ್ನು ಅತ್ಯಂತ ಕ್ರೂರವಾಗಿ ಹಿಂಸೆ ನೀಡಿ ಕೊಲೆ ಮಾಡಲಾಗಿದೆ. ಕೊಲೆ ಮಾಡಿದ ನಂತರ ಸುಮಾರು ಎರಡು ಗಂಟೆಗಳ ಕಾಲ ಶವವನ್ನು ಕಾರಿನಲ್ಲಿರಿಸಿಕೊಂಡು ನಗರದಾದ್ಯಂತ ಓಡಾಡಲಾಗಿದೆ ಎಂಬ ಮಾಹಿತಿಯಿದೆ. ಈ ಪ್ರಕರಣದ ಹಿಂದೆ ದೊಡ್ಡ ಸಂಚಿದ್ದು, ಪೊಲೀಸರು ಉನ್ನತ ಮಟ್ಟದ ತನಿಖೆ ನಡೆಸಿ ತಪ್ಪಿತಸ್ಥರಿಗೆ ಉಗ್ರ ಶಿಕ್ಷೆ ನೀಡಬೇಕು," ಎಂದು ಒತ್ತಾಯಿಸಿದರು.

ನ್ಯಾಯವಾದಿ ಕೆ.ವಿ. ಪ್ರವೀಣ್ ಮಾತನಾಡಿ, "ಈ ಕೊಲೆಯ ಹಿಂದೆ ಜಿಹಾದಿ ಮನಸ್ಥಿತಿ ಸ್ಪಷ್ಟವಾಗಿ ಗೋಚರಿಸುತ್ತಿದೆ. ಈಗಾಗಲೇ ಬಿಹಾರ ಸರ್ಕಾರಕ್ಕೆ ಈ ಪ್ರಕರಣದ ಬಗ್ಗೆ ಮಾಹಿತಿ ರವಾನೆಯಾಗಿದ್ದು, ಮುಂಬರುವ ದಿನಗಳಲ್ಲಿ ಇದು ಸಿಬಿಐ ತನಿಖೆಗೆ ಒಳಪಟ್ಟರೂ ಅಚ್ಚರಿಯಿಲ್ಲ. ಹೊಟ್ಟೆಪಾಡಿಗಾಗಿ ಬಂದ ಬಡ ಕಾರ್ಮಿಕನ ಮೇಲೆ ನಡೆದ ಈ ಅಮಾನವೀಯ ಹಲ್ಲೆ ಇಡೀ ಸಮಾಜ ತಲೆತಗ್ಗಿಸುವಂತದ್ದು," ಎಂದರು.

ಬಿಜೆಪಿ ನಗರ ಮಂಡಲ ಅಧ್ಯಕ್ಷ ಕೆ.ಆರ್. ಗಣೇಶ್ ಪ್ರಸಾದ್ ಮಾತನಾಡಿ, "ಕೇವಲ ಸಂಬಳದ ವಿಚಾರಕ್ಕಾಗಿ ಇಷ್ಟು ಕ್ರೂರವಾಗಿ ಕೊಲೆ ಮಾಡಿರುವುದು ಅಮಾನವೀಯ. ಜಿಲ್ಲಾ ರಕ್ಷಣಾಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ನೀಡಿದ ಹೇಳಿಕೆ ಹಲವು ಅನುಮಾನಗಳಿಗೆ ಕಾರಣವಾಗಿದೆ. ಕೇವಲ ಸ್ನೂಕರ್ ಸ್ಟಿಕ್‌ನಿಂದ ಇಷ್ಟು ಭೀಕರವಾಗಿ ಕೊಲೆ ಮಾಡಲು ಸಾಧ್ಯವಿಲ್ಲ. ಪೊಲೀಸರು ಯಾವುದೇ ಪ್ರಭಾವಕ್ಕೆ ಒಳಗಾಗದೆ ಕೂಲಂಕಷವಾಗಿ ತನಿಖೆ ನಡೆಸಬೇಕು," ಎಂದು ಆಗ್ರಹಿಸಿದರು.

ಬಜರಂಗದಳದ ಸುನಿಲ್ ರುದ್ರಪ್ಪ, ಕೀರ್ತಿ ಬೊಮ್ಮತ್ತಿ, ಸೋಮ ಅಮಟ್ಟಿಕೊಪ್ಪ, ನಿತೀಶ್, ಅಣ್ಣಪ್ಪ, ಗಿರಿ ಎಸ್ಎನ್‌ನಗರ, ಸಂತೋಷ್ ಅವೇನಿಕರ್ ಹಾಗೂ ಬಿಜೆಪಿ ಮುಖಂಡರಾದ ಅರುಣ ಕುಗ್ವೆ, ಬಿ.ಟಿ. ರವೀಂದ್ರ, ಪರಶುರಾಮ್, ಸುರೇಶ್ ಸೇರಿದಂತೆ ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು.

ಜಮೀಲ್ ಸಾಗರ್ “ಪಬ್ಲಿಕ್ ನೆಕ್ಸ್ಟ್ ಸಾಗರ”

Edited By : PublicNext Desk
Kshetra Samachara

Kshetra Samachara

03/04/2026 04:46 pm

Cinque Terre

520

Cinque Terre

0