ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸಾಗರ: ಕಾರ್‌ನಲ್ಲಿ ಬಿಹಾರ ಮೂಲದ ಯುವಕನ ಶವ ಪತ್ತೆ - ಆರೋಪಿಯ ಹೆಡೆಮುರಿ ಕಟ್ಟಿದ ಪೊಲೀಸರು

ಶಿವಮೊಗ್ಗ: ಜಿಲ್ಲೆಯ ಸಾಗರ ನಗರದ ಹೃದಯಭಾಗದಲ್ಲಿ ಬೆಳ್ಳಂಬೆಳಗ್ಗೆ ಭೀಕರ ಕೊಲೆಯೊಂದು ಬೆಳಕಿಗೆ ಬಂದಿದ್ದು, ಸಾರ್ವಜನಿಕರನ್ನು ಬೆಚ್ಚಿಬೀಳಿಸಿದೆ. ನಗರದ ನೆಹರು ನಗರದಲ್ಲಿ ನಿಲ್ಲಿಸಿದ್ದ ಹೊಂಡಾ ಸಿಟಿ ಕಾರಿನಲ್ಲಿ ಬಿಹಾರ ಮೂಲದ ಯುವಕನ ಶವ ಪತ್ತೆಯಾಗಿದ್ದು, ಈ ಸಂಬಂಧ ಹೋಟೆಲ್ ಮಾಲೀಕ ಇಮ್ರಾನ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಕೇವಲ ಹಣಕಾಸಿನ ವಿಚಾರಕ್ಕೆ ಶುರುವಾದ ಸಣ್ಣ ಕಿರಿಕ್, ಕೊಲೆಯಲ್ಲಿ ಅಂತ್ಯವಾಗಿರುವುದು ತೀವ್ರ ಆತಂಕಕ್ಕೆ ಕಾರಣವಾಗಿದೆ.

ಶಿವಮೊಗ್ಗ ರಸ್ತೆಯಲ್ಲಿರುವ ರೂಫ್ ಟಾಪ್ ಕೆಫೆಯಲ್ಲಿ ಕೆಲಸ ಮಾಡುತ್ತಿದ್ದ ಬಿಹಾರ ಮೂಲದ ಟಿಂಕು ಶರ್ಮಾ (30) ಕೊಲೆಯಾದ ದುರ್ದೈವಿ. ಬುಧವಾರ ರಾತ್ರಿಯಿಂದಲೇ ಹಣದ ವಿಚಾರವಾಗಿ ಮಾಲೀಕ ಇಮ್ರಾನ್ ಮತ್ತು ಟಿಂಕು ನಡುವೆ ವಾಗ್ವಾದ ನಡೆದಿತ್ತು ಎನ್ನಲಾಗಿದೆ. ಈ ಜಗಳ ಗುರುವಾರ ಬೆಳಿಗ್ಗೆ ವಿಕೋಪಕ್ಕೆ ತಿರುಗಿದ್ದು, ಆವೇಶಕ್ಕೊಳಗಾದ ಮಾಲೀಕ ಇಮ್ರಾನ್, ಟಿಂಕು ಶರ್ಮಾ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ. ಹಲ್ಲೆಯ ತೀವ್ರತೆಗೆ ಯುವಕ ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾನೆ.

ಕೊಲೆಯ ಬಳಿಕ ಸಾಕ್ಷ್ಯ ನಾಶಪಡಿಸುವ ಉದ್ದೇಶದಿಂದಲೋ ಅಥವಾ ಗಾಬರಿಯಿಂದಲೋ, ಆರೋಪಿಯು ಮೃತದೇಹವನ್ನು ತನ್ನ ಕೆ.ಎ. 15 ಎಂ 7022 ನೋಂದಣಿ ಸಂಖ್ಯೆಯ ಹೊಂಡಾ ಸಿಟಿ ಕಾರಿನಲ್ಲಿ ಇರಿಸಿದ್ದ ಎನ್ನಲಾಗಿದೆ. ವಿಷಯ ತಿಳಿಯುತ್ತಿದ್ದಂತೆ ಕಾರ್ಯಪ್ರವೃತ್ತರಾದ ಸಾಗರ ಪೊಲೀಸರು ತಕ್ಷಣವೇ ಸ್ಥಳಕ್ಕೆ ಧಾವಿಸಿ ಆರೋಪಿಯನ್ನು ಹೆಡೆಮುರಿ ಕಟ್ಟಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ. ನಿಖಿಲ್ ಮತ್ತು ಎಎಸ್‌ಪಿ ಡಾ. ಬೆನಕ್ ಪ್ರಸಾದ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ಇಲಾಖೆಯ SOCO ತಂಡ ಭೇಟಿ ನೀಡಿ, ಬೆರಳು ಗುರುತು ಹಾಗೂ ಇತರೆ ಸಾಕ್ಷ್ಯಗಳನ್ನು ಸಂಗ್ರಹಿಸಿದೆ. ನಂಬಿ ಬಂದ ಕೆಲಸಗಾರನನ್ನು ಕ್ಷುಲ್ಲಕ ಕಾರಣಕ್ಕೆ ಮಾಲೀಕನೇ ಹತ್ಯೆ ಮಾಡಿರುವುದು ಸ್ಥಳೀಯರಲ್ಲಿ ಸಂಚಲನ ಮೂಡಿಸಿದೆ. ಸದ್ಯ ಪೊಲೀಸರು ಆರೋಪಿ ಇಮ್ರಾನ್‌ನನ್ನು ತೀವ್ರ ವಿಚಾರಣೆಗೊಳಪಡಿಸಿದ್ದು, ಈ ಕೃತ್ಯದ ಹಿಂದೆ ಬೇರೆ ಯಾವುದಾದರೂ ಪ್ರಬಲ ಕಾರಣಗಳಿವೆಯೇ ಎಂಬ ಆಯಾಮದಲ್ಲೂ ತನಿಖೆ ಮುಂದುವರಿಸಿದ್ದಾರೆ.

ಜಮೀಲ್ ಸಾಗರ್ “ಪಬ್ಲಿಕ್ ನೆಕ್ಸ್ಟ್ ಸಾಗರ”

Edited By : Manjunath H D
PublicNext

PublicNext

02/04/2026 07:39 pm

Cinque Terre

9.64 K

Cinque Terre

0

ಸಂಬಂಧಿತ ಸುದ್ದಿ