ಶಿವಮೊಗ್ಗ : ಯುವಕನೊಬ್ಬನಿಗೆ ನಿಂದಿಸಿ, ಹಲ್ಲೆ ಮಾಡಿ, ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪ ಸಾಬೀತಾಗಿದ್ದರಿಂದ ಭದ್ರಾವತಿ ನಾಲ್ಕನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಇಬ್ಬರು ಅಪರಾಧಿಗಳಿಗೆ 10 ವರ್ಷ ಕಠಿಣ ಕಾರಾಗೃಹ ವಾಸದ ಶಿಕ್ಷೆ ಹಾಗೂ 2.23 ಲಕ್ಷ ದಂಡ ವಿಧಿಸಿದೆ.
ಭದ್ರಾವತಿ ತಾಲ್ಲೂಕು ಮಲ್ಲಾಪುರ ಗ್ರಾಮದ ನಾಗರಾಜ್ ರಾವ್ (26) ಹಾಗೂ ಮಂಜೋಜಿ ರಾವ್ (50) ಶಿಕ್ಷೆಗೆ ಗುರಿಯಾದವರು.
ಅದೇ ಗ್ರಾಮದ ನವೀನ್ ಕುಮಾರ್ (22) ಎಂಬ ಯುವಕನಿಗೆ ಮೇ 5, 2021ರಂದು ತಮ್ಮ ಮನೆಯ ಹುಡುಗಿಯೊಬ್ಬಳಿಗೆ ಮೆಸೇಜ್ ಕಳಿಸುತ್ತೀಯಾ ಎಂದು ಬೈದು, ಹಲ್ಲೆ ಮಾಡಿ, ಜೀವ ಬೆದರಿಕೆ ಹಾಕಿದ್ದರೆಂದು ಆರೋಪಿಸಲಾಗಿತ್ತು. ಈ ವಿಚಾರವನ್ನು ಮನಸ್ಸಿಗೆ ಹಚ್ಚಿಕೊಂಡು ನವೀನ್ ಕುಮಾರ್ ಆತ್ಮಹತ್ಯೆ ಮಾಡಿಕೊಂಡಿದ್ದರು.
ಹೊಳೆಹೊನ್ನೂರು ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ಬಂಧಿಸಿ, ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ಇಬ್ಬರು ಅಪರಾಧಿಗಳಿಗೆ ಶಿಕ್ಷೆ ವಿಧಿಸಿದ ನ್ಯಾಯಾಧೀಶರು, ಮೃತನ ತಂದೆಗೆ 1.5 ಲಕ್ಷ ಪರಿಹಾರ ನೀಡುವಂತೆ ಆದೇಶಿಸಿದ್ದಾರೆ.
Kshetra Samachara
02/04/2026 09:39 am
LOADING...