ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ರವಿ ಬಸ್ರೂರ್ ಮ್ಯೂಸಿಕ್‌ನಲ್ಲಿ ‘ಕಟ್ಟಾಲನ್’ ಮೇ 14ಕ್ಕೆ ಭರ್ಜರಿ ಎಂಟ್ರಿ!

ಬೆಂಗಳೂರು: ‘ಕೆಜಿಎಫ್’, ‘ಮಾರ್ಕೋ’ ಮತ್ತು ‘ಟಾಕ್ಸಿಕ್’ ಸಿನಿಮಾಗಳ ಮೂಲಕ ದಕ್ಷಿಣ ಭಾರತದ ಚಿತ್ರರಂಗದಲ್ಲಿ ಸಂಚಲನ ಮೂಡಿಸಿದ ಕನ್ನಡಿಗ ಸಂಗೀತ ನಿರ್ದೇಶಕ ರವಿ ಬಸ್ರೂರ್ ಇದೀಗ ಮತ್ತೊಂದು ಭಾರೀ ಪ್ರಾಜೆಕ್ಟ್‌ನೊಂದಿಗೆ ಸಿದ್ಧರಾಗಿದ್ದಾರೆ. ಕ್ಯೂಬ್ಸ್ ಎಂಟರ್‌ಟೈನ್‌ಮೆಂಟ್ಸ್ ನಿರ್ಮಾಣದ ಪ್ಯಾನ್-ಇಂಡಿಯಾ ಆಕ್ಷನ್ ಥ್ರಿಲ್ಲರ್ ‘ಕಟ್ಟಾಲನ್’ ಚಿತ್ರಕ್ಕೆ ಅವರು ಸಂಗೀತ ನೀಡುತ್ತಿದ್ದು, ಸಿನಿಮಾದ ಮೇಲೆ ಅಪಾರ ನಿರೀಕ್ಷೆ ಹುಟ್ಟಿಕೊಂಡಿದೆ.

ಈ ಚಿತ್ರದ ಸಂಗೀತದ ಬಗ್ಗೆ ಆರಂಭದಲ್ಲಿ ಅಜನೀಶ್ ಲೋಕನಾಥ್ ಹೆಸರು ಕೇಳಿಬಂದಿದ್ದರೂ, ಇದೀಗ ಅಧಿಕೃತವಾಗಿ ರವಿ ಬಸ್ರೂರ್ ಅವರೇ ಸಂಗೀತದ ಹೊಣೆ ಹೊತ್ತಿದ್ದಾರೆ. ಅವರ ಮಾಸ್ ಬಿಜಿಎಂ ಮತ್ತು ವಿಭಿನ್ನ ಸಂಗೀತ ಶೈಲಿ ಚಿತ್ರಕ್ಕೆ ಹೊಸ ಎನರ್ಜಿ ನೀಡಲಿದೆ ಎನ್ನಲಾಗುತ್ತಿದೆ. ಕಟ್ಟಾಲನ್’ ಸಿನಿಮಾ ಮೇ 14 ರಂದು ವಿಶ್ವದಾದ್ಯಂತ ಬಿಡುಗಡೆಯಾಗಲಿದೆ. ಮಲಯಾಳಂ ಚಿತ್ರರಂಗದ ಇತಿಹಾಸದಲ್ಲೇ ಇದು ಅತಿದೊಡ್ಡ ಬಿಡುಗಡೆಗಳಲ್ಲಿ ಒಂದಾಗಲಿದೆ ಎಂಬ ನಿರೀಕ್ಷೆ ಇದೆ.

ಚಿತ್ರದಲ್ಲಿ ಆಂಟೋನಿ ವರ್ಗೀಸ್ ನಾಯಕನಾಗಿ ಕಾಣಿಸಿಕೊಂಡಿದ್ದು, ತೆಲುಗಿನ ಸುನಿಲ್, ಕಬೀರ್ ದುಹಾನ್ ಸಿಂಗ್ ಹಾಗೂ ಬಾಲಿವುಡ್‌ನ ಪಾರ್ಥ್ ತಿವಾರಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ದುಶಾರಾ ವಿಜಯನ್ ಈ ಚಿತ್ರದ ಮೂಲಕ ಮಲಯಾಳಂ ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ.

ಅಂತರರಾಷ್ಟ್ರೀಯ ಮಟ್ಟದ ಆಕ್ಷನ್ ಸನ್ನಿವೇಶಗಳು ಚಿತ್ರದ ಪ್ರಮುಖ ಆಕರ್ಷಣೆಯಾಗಿದ್ದು, ಥೈಲ್ಯಾಂಡ್‌ನಲ್ಲಿ ಸಾಹಸ ದೃಶ್ಯಗಳನ್ನು ಚಿತ್ರೀಕರಿಸಲಾಗಿದೆ. ‘ಆಂಗ್-ಬಾಕ್’ ಸರಣಿಯ ಖ್ಯಾತ ಸ್ಟಂಟ್ ಮಾಸ್ಟರ್ ಕೆಚಾ ಖಾಂಫಕ್ಡೀ ಸಾಹಸ ನಿರ್ದೇಶನ ಮಾಡಿದ್ದು, ‘ಆಂಗ್-ಬಾಕ್’ ಖ್ಯಾತಿಯ ‘ಪಾಂಗ್’ ಎಂಬ ಆನೆಯೂ ಚಿತ್ರದಲ್ಲಿ ಕಾಣಿಸಿಕೊಳ್ಳಲಿದೆ.

ಚಿತ್ರೀಕರಣ ಮುಗಿಯುವ ಮುನ್ನವೇ ‘ಕಟ್ಟಾಲನ್’ ಸಿನಿಮಾ ಪ್ರಿ-ರಿಲೀಸ್ ಹಂತದಲ್ಲೇ ಹಲವು ದಾಖಲೆಗಳನ್ನು ನಿರ್ಮಿಸಿದೆ. ಖ್ಯಾತ T-Series ಸಂಸ್ಥೆ ಚಿತ್ರದ ಆಡಿಯೋ ಹಕ್ಕುಗಳನ್ನು ಪಡೆದಿದ್ದು, ಶೆಮಾರು ಡಿಜಿಟಲ್ ಮತ್ತು ಸ್ಯಾಟಲೈಟ್ ಹಕ್ಕುಗಳನ್ನು ಪಡೆದಿದೆ.

ಈ ಚಿತ್ರವನ್ನು ಪಾಲ್ ಜಾರ್ಜ್ ತಮ್ಮ ಚೊಚ್ಚಲ ನಿರ್ದೇಶನದಲ್ಲಿ ರೂಪಿಸಿದ್ದು, ಶರೀಫ್ ಮೊಹಮ್ಮದ್ ಅವರು ಕ್ಯೂಬ್ಸ್ ಎಂಟರ್‌ಟೈನ್‌ಮೆಂಟ್ಸ್ ಮೂಲಕ ನಿರ್ಮಿಸಿದ್ದಾರೆ. ಕನ್ನಡ, ಮಲಯಾಳಂ, ತಮಿಳು, ತೆಲುಗು ಮತ್ತು ಹಿಂದಿ ಸೇರಿದಂತೆ ಐದು ಭಾಷೆಗಳಲ್ಲಿ ಸಿನಿಮಾ ಬಿಡುಗಡೆಯಾಗಲಿದೆ.ರವಿ ಬಸ್ರೂರ್ ಅವರ ಶಕ್ತಿಶಾಲಿ ಸಂಗೀತ ಮತ್ತು ಭರ್ಜರಿ ಆಕ್ಷನ್ ಜೊತೆ ‘ಕಟ್ಟಾಲನ್’ ಸಿನಿಮಾ ಚಿತ್ರಮಂದಿರಗಳಲ್ಲಿ ಎಲೆಕ್ಟ್ರಿಫೈಯಿಂಗ್ ಅನುಭವ ನೀಡಲಿದೆ ಎಂಬುದು ಸಿನಿಪ್ರೇಮಿಗಳ ನಿರೀಕ್ಷೆ.

Edited By : Nagaraj Tulugeri
PublicNext

PublicNext

01/04/2026 06:19 pm

Cinque Terre

15.31 K

Cinque Terre

0