ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಇಂಡೋನೇಷ್ಯಾದಲ್ಲಿ ಪ್ರಬಲ ಭೂಕಂಪ : 7.4 ತೀವ್ರತೆ ದಾಖಲು ಸುನಾಮಿ ಭೀತಿ

ಇಂಡೋನೇಷ್ಯಾದ ಪೂರ್ವ ಕರಾವಳಿ ಪ್ರದೇಶದಲ್ಲಿ ಗುರುವಾರ ಬೆಳ್ಳಂಬೆಳಿಗ್ಗೆ ಪ್ರಬಲ ಭೂಕಂಪ ಸಂಭವಿಸಿದೆ. ರಿಕ್ಟರ್ ಮಾಪಕದಲ್ಲಿ 7.4 ತೀವ್ರತೆ ದಾಖಲಾದ ಈ ಕಂಪನದಿಂದಾಗಿ ಒಬ್ಬ ವ್ಯಕ್ತಿ ಸಾವನ್ನಪ್ಪಿದ್ದು, ಕಟ್ಟಡಗಳು ಕುಸಿದಿವೆ. ಜೊತೆಗೆ ಸುನಾಮಿ ಎಚ್ಚರಿಕೆ ನೀಡಲಾಗಿತ್ತು. ಈ ನೈಸರ್ಗಿಕ ವಿಕೋಪದ ಪರಿಣಾಮವಾಗಿ ಕರಾವಳಿ ತೀರದಲ್ಲಿ ಸುಮಾರು 75 ಸೆಂಟಿಮೀಟರ್ ಎತ್ತರದ ಅಲೆಗಳು ಕಾಣಿಸಿಕೊಂಡು ಆತಂಕ ಸೃಷ್ಟಿಸಿದ್ದವು.

ಅಮೆರಿಕದ ಭೂವೈಜ್ಞಾನಿಕ ಸಮೀಕ್ಷೆ (USGS) ವರದಿ ಪ್ರಕಾರ, ಸುಲವೇಸಿ ಮತ್ತು ಮಲುಕು ದ್ವೀಪ ಸಮೂಹಗಳ ನಡುವಿನ ಮೊಲುಕ್ಕಾ ಸಮುದ್ರದಲ್ಲಿ ಭೂಮಿಯ ಆಳದ 35 ಕಿಲೋಮೀಟರ್ ಪದರದಲ್ಲಿ ಈ ಕಂಪನ ಉಂಟಾಗಿದೆ. ಭೂಮಿಯು ಒಂದು ನಿಮಿಷಕ್ಕೂ ಹೆಚ್ಚು ಕಾಲ ನಡುಗಿದ್ದು, ಕಂಪನದ ತೀವ್ರತೆ ಜನರಲ್ಲಿ ಭಾರಿ ಆತಂಕ ಮೂಡಿಸಿತ್ತು.

ಉತ್ತರ ಸುಲವೇಸಿ ಪ್ರಾಂತ್ಯದ ಮನಡೋ ನಗರದಲ್ಲಿ ಕಟ್ಟಡವೊಂದು ಕುಸಿದು ಬಿದ್ದ ಪರಿಣಾಮ ವ್ಯಕ್ತಿಯೊಬ್ಬರು ಅವಶೇಷಗಳ ಅಡಿ ಸಿಲುಕಿ ದಾರುಣವಾಗಿ ಸಾವನ್ನಪ್ಪಿದ್ದಾರೆ. ಮತ್ತೊಬ್ಬ ವ್ಯಕ್ತಿಯ ಕಾಲಿಗೆ ತೀವ್ರ ಪೆಟ್ಟಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಶೋಧ ಮತ್ತು ರಕ್ಷಣಾ ಅಧಿಕಾರಿ ಜಾರ್ಜ್ ಲಿಯೋ ಮರ್ಸಿ ರಂಡಾಂಗ್ ಮಾಹಿತಿ ನೀಡಿದ್ದಾರೆ. ಕಂಪನ ಆರಂಭವಾಗುತ್ತಿದ್ದಂತೆ ಮನಡೋ ಮತ್ತು ಸುತ್ತಮುತ್ತಲಿನ ನಗರಗಳ ಜನರು ಭಯಭೀತರಾಗಿ ಮನೆಯಿಂದ ಹೊರಬಂದರು. ಕೆಲವು ವಿದ್ಯಾರ್ಥಿಗಳು ಶಾಲಾ ಕೊಠಡಿಗಳಿಂದ ಹೊರಗೆ ಓಡಿ ಬಂದ ದೃಶ್ಯಗಳು ಕಂಡುಬಂದಿವೆ.

ಪೆಸಿಫಿಕ್ ಸುನಾಮಿ ಎಚ್ಚರಿಕೆ ಕೇಂದ್ರ (PTWC) ಆರಂಭದಲ್ಲಿ ಇಂಡೋನೇಷ್ಯಾ, ಫಿಲಿಪೈನ್ಸ್ ಮತ್ತು ಮಲೇಷ್ಯಾ ಕರಾವಳಿಗಳಲ್ಲಿ ಸುನಾಮಿ ಸಂಭವಿಸುವ ಸಾಧ್ಯತೆಯಿದೆ ಎಂದು ಎಚ್ಚರಿಕೆ ನೀಡಿತ್ತು. ಉತ್ತರ ಮಿನಹಾಸಾದಲ್ಲಿ 75 ಸೆಂಟಿಮೀಟರ್, ಬಿಟುಂಗ್‌ನಲ್ಲಿ 20 ಸೆಂಟಿಮೀಟರ್ ಹಾಗೂ ಉತ್ತರ ಮಲುಕು ಪ್ರಾಂತ್ಯದಲ್ಲಿ 30 ಸೆಂಟಿಮೀಟರ್ ಎತ್ತರದ ಅಲೆಗಳು ದಾಖಲಾಗಿವೆ. ಆದರೆ, ಎರಡು ಗಂಟೆಗಳ ನಂತರ ಸುನಾಮಿ ಭೀತಿ ದೂರವಾಯಿತು ಎಂದು ಘೋಷಿಸಿ ಎಚ್ಚರಿಕೆಯನ್ನು ಹಿಂಪಡೆಯಲಾಯಿತು.

ಇಂಡೋನೇಷ್ಯಾದ ಭೂವೈಜ್ಞಾನಿಕ ಸಂಸ್ಥೆ (BMKG) ಮುಖ್ಯಸ್ಥ ತೇವುಕು ಫೈಸಲ್ ಫತಾನಿ ಅವರ ಪ್ರಕಾರ, ಮುಖ್ಯ ಕಂಪನದ ನಂತರ ಸುಮಾರು 11 ಲಘು ಕಂಪನಗಳು (Aftershocks) ಸಂಭವಿಸಿವೆ. ಇದರಲ್ಲಿ ಅತ್ಯಂತ ದೊಡ್ಡ ಕಂಪನವು 5.5 ತೀವ್ರತೆಯನ್ನು ಹೊಂದಿತ್ತು.

ಇಂಡೋನೇಷ್ಯಾದಲ್ಲಿ ಪದೇ ಪದೇ ಭೂಕಂಪ ಏಕೆ?

ಇಂಡೋನೇಷ್ಯಾವು ಪೆಸಿಫಿಕ್ "ರಿಂಗ್ ಆಫ್ ಫೈರ್" (Ring of Fire) ಪ್ರದೇಶದಲ್ಲಿದೆ. ಇದು ಟೆಕ್ಟೋನಿಕ್ ಪ್ಲೇಟ್‌ಗಳು ಒಂದಕ್ಕೊಂದು ಡಿಕ್ಕಿ ಹೊಡೆಯುವ ಪ್ರದೇಶವಾಗಿದ್ದು, ಇಲ್ಲಿ ಜ್ವಾಲಾಮುಖಿ ಸ್ಫೋಟಗಳು ಮತ್ತು ಭೂಕಂಪಗಳು ಸಾಮಾನ್ಯ. ಉದಾಹರಣೆಗೆ, 2004ರಲ್ಲಿ ಸಂಭವಿಸಿದ 9.1 ತೀವ್ರತೆಯ ಪ್ರಬಲ ಭೂಕಂಪ ಮತ್ತು ಸುನಾಮಿಯಿಂದಾಗಿ ಇಂಡೋನೇಷ್ಯಾದಲ್ಲಿ ಸುಮಾರು 1.7 ಲಕ್ಷಕ್ಕೂ ಹೆಚ್ಚು ಜನರು ಬಲಿಯಾಗಿದ್ದರು.

Edited By : Nirmala Aralikatti
PublicNext

PublicNext

02/04/2026 12:04 pm

Cinque Terre

32.09 K

Cinque Terre

1