ಬೆಂಗಳೂರು: ಬೆಂಗಳೂರು ಕೇಂದ್ರ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಸ್ವಚ್ಛತೆ ಕಾಪಾಡುವ, ತ್ಯಾಜ್ಯಮುಕ್ತ ನಗರ ನಿರ್ಮಿಸುವ ಹಾಗೂ ಸ್ವಚ್ಛ ಸರ್ವೇಕ್ಷಣ 2025-26ರ ರಾಷ್ಟ್ರೀಯ ಶ್ರೇಯಾಂಕ ಪಟ್ಟಿಯಲ್ಲಿ ಉತ್ತಮ ಸ್ಥಾನ ಗಳಿಸುವ ಗುರಿಯೊಂದಿಗೆ, ಪಾಲಿಕೆಯು ವಿಶೇಷ ಸ್ವಚ್ಛತಾ ಅಭಿಯಾನವನ್ನು ಹಮ್ಮಿಕೊಂಡಿದೆ. ಈ ಅಭಿಯಾನದ ಭಾಗವಾಗಿ, ಪಾಲಿಕೆಯ ಕಾರ್ಯಯೋಜನೆಯ 3ನೇ ಹಂತದಲ್ಲಿ 30 ದೇವಸ್ಥಾನಗಳು, ಅವುಗಳ ಸುತ್ತಮುತ್ತಲಿನ ಪ್ರದೇಶಗಳು ಹಾಗೂ ಐತಿಹಾಸಿಕ ಸ್ಥಳಗಳನ್ನು ಶುಚಿಗೊಳಿಸಲಾಗಿದೆ ಎಂದು ಕೇಂದ್ರ ನಗರ ಪಾಲಿಕೆಯ ಆಯುಕ್ತರಾದ ಶ್ರೀ ರಾಜೇಂದ್ರ ಚೋಳನ್ ತಿಳಿಸಿದ್ದಾರೆ.
ಅಭಿಯಾನದ ಉದ್ದೇಶ ಮತ್ತು ವ್ಯಾಪ್ತಿ
ಪ್ರತಿದಿನ ಸಾವಿರಾರು ಭಕ್ತರು ಭೇಟಿ ನೀಡುವ ಧಾರ್ಮಿಕ ಸ್ಥಳಗಳಾದ ದೇವಸ್ಥಾನಗಳ ಆವರಣ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನೈರ್ಮಲ್ಯ ಕಾಪಾಡುವುದು ನಗರದ ಸ್ವಚ್ಛತೆಗೆ ಅತ್ಯಗತ್ಯ. ಈ ಹಿನ್ನೆಲೆಯಲ್ಲಿ, ಸ್ವಚ್ಛ ಸರ್ವೇಕ್ಷಣ 2025-26ರ ನಿಮಿತ್ತ ಕೇಂದ್ರ ನಗರ ಪಾಲಿಕೆಯು ರೂಪಿಸಿರುವ ಸ್ವಚ್ಛತಾ ಅಭಿಯಾನದ ಮೂರನೇ ಭಾಗವಾಗಿ ಈ ಮಹತ್ವದ ಕಾರ್ಯ ಕೈಗೊಳ್ಳಲಾಗಿದೆ. ಆಯ್ಕೆ ಮಾಡಲಾದ 30 ದೇವಸ್ಥಾನಗಳನ್ನು ಸಮಗ್ರವಾಗಿ ಶುಚಿಗೊಳಿಸುವುದರ ಜೊತೆಗೆ, ಸಾರ್ವಜನಿಕರಲ್ಲಿ ತ್ಯಾಜ್ಯ ಎಸೆಯದಂತೆ ಹಾಗೂ ಶುಚಿತ್ವ ಕಾಪಾಡುವಂತೆ ಜಾಗೃತಿ ಮೂಡಿಸಲಾಗಿದೆ.
ಶುಚಿಗೊಳಿಸಿದ ಪ್ರಮುಖ ದೇವಸ್ಥಾನಗಳು
ಈ ಅಭಿಯಾನದಲ್ಲಿ ಧರ್ಮರಾಯಸ್ವಾಮಿ ದೇವಸ್ಥಾನ, ಹೊಂಬೇಗೌಡನಗರದ ಶ್ರೀ ಆಂಜನೇಯ ದೇವಸ್ಥಾನ, ಸಿದ್ಧಾಪುರದ ಶ್ರೀರಾಮ ದೇವಸ್ಥಾನ, ವಿವಿಪುರಂ ಕನ್ಯಕಾಪರಮೇಶ್ವರಿ ದೇವಸ್ಥಾನ, ಗುಟ್ಟಹಳ್ಳಿ ಶ್ರೀ ಶಿವಶಂಕರ ದೇವಸ್ಥಾನ, ಸುಧಾಮನಗರದ ಶ್ರೀ ಗಣೇಶ ದೇವಸ್ಥಾನ, ಚಾಮರಾಜಪೇಟೆಯ ಶ್ರೀ ರಾಮೇಶ್ವರ ದೇವಸ್ಥಾನ, ರಾಯಪುರಂನ ಶ್ರೀ ಕಲ್ಲು ನಾಗರ ದೇವಸ್ಥಾನ, ಶಿವಾಜಿನಗರದ ಶ್ರೀ ಮುತ್ಯಾಲಮ್ಮ ದೇವಸ್ಥಾನ, ಜಿಬಿಎ ಕೇಂದ್ರ ಕಛೇರಿ ಆವರಣದ ಏಳು ಸುತ್ತಿನಕೋಟೆ ಸಪ್ತಮಾತ್ರಕಾ ಆದಿಪರಾಶಕ್ತಿ ದೇವಸ್ಥಾನ, ಸಿ.ವಿ. ರಾಮನ್ ನಗರದ ಶ್ರೀ ಕೋದಂಡರಾಮಸ್ವಾಮಿ ದೇವಸ್ಥಾನ ಸೇರಿದಂತೆ ಇನ್ನಿತರ ದೇವಸ್ಥಾನಗಳನ್ನು ಸ್ವಚ್ಛಗೊಳಿಸಲಾಗಿದೆ.
ಮೇಲುಸ್ತುವಾರಿ ಮತ್ತು ಭಾಗವಹಿಸುವಿಕೆ
ಈ ವಿಶೇಷ ಸ್ವಚ್ಛತಾ ಅಭಿಯಾನವು ಅಭಿವೃದ್ಧಿ ಅಪರ ಆಯುಕ್ತರಾದ ದಲ್ಜಿತ್ ಕುಮಾರ್ ಅವರ ಮೇಲುಸ್ತುವಾರಿಯಲ್ಲಿ ನಡೆಯಿತು. ಡಿಜಿಎಂ ಭೀಮೇಶ್ ನಾಯಕ್, ಆಯಾ ವಿಭಾಗಗಳ ಎಜಿಎಂಗಳು, ಪೌರಕಾರ್ಮಿಕರು ಹಾಗೂ ಆಟೋ ಟಿಪ್ಪರ್ ಸಿಬ್ಬಂದಿ ಈ ಕಾರ್ಯದಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು.
PublicNext
03/04/2026 05:04 pm