ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಯುಡಿಎಫ್ ಮೈತ್ರಿಕೂಟ ಬಹುಮತದಿಂದ ಗೆಲ್ಲಲಿದೆ - ಡಿ.ಕೆ ಶಿವಕುಮಾರ್

ಕಣ್ಣೂರು (ಕೇರಳ): ಕೇರಳದ ಜನತೆ ಬದಲಾವಣೆ, ಅಭಿವೃದ್ಧಿ, ನಿರುದ್ಯೋಗ ಸಮಸ್ಯೆಗಳಿಗೆ ಪರಿಹಾರ ಹಾಗೂ ಸ್ವಾಮಿ ಅಯ್ಯಪ್ಪನಿಗೆ ನ್ಯಾಯವನ್ನು ಬಯಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ, ಕಾಂಗ್ರೆಸ್ ಹಾಗೂ ಯುಡಿಎಫ್ ಮೈತ್ರಿಕೂಟವನ್ನು ಮೂರನೇ ಎರಡರಷ್ಟು ಬಹುಮತದೊಂದಿಗೆ ಗೆಲ್ಲಿಸಲಿದ್ದಾರೆ ಎಂಬ ಸಂಪೂರ್ಣ ವಿಶ್ವಾಸ ನಮಗಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.

ರವಿವಾರ ಕಣ್ಣೂರಿನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಟಿ.ಎಂ.ಮೋಹನನ್ ಪರವಾಗಿ ಚುನಾವಣಾ ಪ್ರಚಾರ ನಡೆಸುತ್ತಿದ್ದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಯ್ಯಪ್ಪ ಸ್ವಾಮಿ ದೇವಾಲಯದ ಚಿನ್ನ ಕಳ್ಳತನ ಪ್ರಕರಣವನ್ನು ಸಿಪಿಐಎಂ ಸರ್ಕಾರ ಸರಿಯಾಗಿ ತನಿಖೆ ನಡೆಸಿಲ್ಲ ಎಂದು ಆರೋಪಿಸಿದರು. ಅಷ್ಟೇ ಅಲ್ಲದೆ, ಕೇಂದ್ರದ ಬಿಜೆಪಿ ಸರ್ಕಾರ ಕೂಡ ಈ ಪ್ರಕರಣದ ಸಿಬಿಐ ತನಿಖೆಯನ್ನು ನಡೆಸಿಲ್ಲ ಎಂದು ಅವರು ಟೀಕಿಸಿದರು.

ಬೆಲೆ ಏರಿಕೆ ಸಮಸ್ಯೆಯ ನಡುವೆ ಸೌದಿ ಸೇರಿದಂತೆ ಅರಬ್ ರಾಷ್ಟ್ರಗಳಿಂದ ಲಕ್ಷಾಂತರ ಜನರು ಕೇರಳಕ್ಕೆ ಮರಳುತ್ತಿದ್ದಾರೆ. ಇದೇ ವೇಳೆ, ಪ್ರತಿ ವರ್ಷ ಲಕ್ಷಾಂತರ ಯುವಕರು ಕೆಲಸ ಹುಡುಕಿಕೊಂಡು ಕೇರಳದಿಂದ ಹೊರಗೆ ಹೋಗುತ್ತಿದ್ದಾರೆ. ಇದು ರಾಜ್ಯದ ಪ್ರಮುಖ ಸಮಸ್ಯೆಯಾಗಿದೆ ಎಂದು ಶಿವಕುಮಾರ್ ಹೇಳಿದರು. ಜನರ ಈ ಸಮಸ್ಯೆಗಳಿಗೆ ಪರಿಹಾರ ನೀಡಲು ಕಾಂಗ್ರೆಸ್‌ನಿಂದ ಮಾತ್ರ ಸಾಧ್ಯವಿದ್ದು, ಕೇರಳಿಗರು ಯುಡಿಎಫ್ ಮೈತ್ರಿಕೂಟವನ್ನು ಆರಿಸಲಿದ್ದಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು. ಕಳೆದ ಹತ್ತು ವರ್ಷಗಳ ಪಿಣರಾಯಿ ವಿಜಯನ್ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದ್ದು, ಅಭಿವೃದ್ಧಿಯ ಯಾವುದೇ ಗುರುತು ತಮ್ಮ ಕಣ್ಣಿಗೆ ಕಾಣುತ್ತಿಲ್ಲ ಎಂದು ಅವರು ದೂರಿದರು.

ಯುಡಿಎಫ್ ಅಧಿಕಾರಕ್ಕೆ ಬಂದರೆ ಮುಖ್ಯಮಂತ್ರಿ ಯಾರಾಗಲಿದ್ದಾರೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಶಿವಕುಮಾರ್, ಕಾಂಗ್ರೆಸ್ ಪಕ್ಷದವರೇ ಮುಖ್ಯಮಂತ್ರಿ ಆಗುತ್ತಾರೆ ಎಂದು ಸ್ಪಷ್ಟಪಡಿಸಿದರು. ಇಲ್ಲಿ ನಿರ್ದಿಷ್ಟ ವ್ಯಕ್ತಿಗಿಂತ ಪಕ್ಷವೇ ಮುಖ್ಯ. ಕಾಂಗ್ರೆಸ್ ಪಕ್ಷ ಸಿದ್ಧಾಂತದ ಮೇಲೆ ನಂಬಿಕೆ ಇಟ್ಟಿದ್ದು, ಪಕ್ಷದ ನಾಯಕತ್ವದಲ್ಲಿ ಸಂಪೂರ್ಣ ವಿಶ್ವಾಸವಿದೆ ಎಂದು ಅವರು ಹೇಳಿದರು. ಬಿಜೆಪಿ ಹಾಗೂ ಕಾಂಗ್ರೆಸ್ ಮಧ್ಯೆ 'ಮ್ಯಾಚ್ ಫಿಕ್ಸಿಂಗ್' ನಡೆದಿದೆ ಎಂಬ ಆರೋಪದ ಬಗ್ಗೆ ಕೇಳಿದ ಪ್ರಶ್ನೆಗೆ ಅವರು ತೀಕ್ಷ್ಣವಾಗಿ ಉತ್ತರಿಸಿದರು. "ರಾಹುಲ್ ಗಾಂಧಿ ಅವರನ್ನು ಸಂಸತ್ ಸದಸ್ಯತ್ವ ಸ್ಥಾನದಿಂದ ಅನರ್ಹಗೊಳಿಸುವುದು ಮ್ಯಾಚ್ ಫಿಕ್ಸಿಂಗ್ ಎನ್ನುತ್ತಾರಾ? ಕೇರಳ ಜನ ಭರ್ಜರಿ ಮತಗಳೊಂದಿಗೆ ರಾಹುಲ್ ಗಾಂಧಿ ಅವರನ್ನು ಸಂಸತ್ತಿಗೆ ಆಯ್ಕೆ ಮಾಡಿದಾಗ, ಅವರು ಕೋಲಾರದಲ್ಲಿ ಮಾಡಿದ ಭಾಷಣವನ್ನು ನೆಪವಾಗಿಟ್ಟುಕೊಂಡು ಸಂಸತ್ ಸದಸ್ಯತ್ವದಿಂದ ಅನರ್ಹಗೊಳಿಸಲು ಮುಂದಾದರು. ಆ ಮೂಲಕ ಕೇರಳ ಜನರಿಗೆ ಅಪಮಾನ ಎಸಗಿದರು. ಇದನ್ನು ಮ್ಯಾಚ್ ಫಿಕ್ಸಿಂಗ್ ಎಂದು ಕರೆಯುತ್ತಾರಾ?" ಎಂದು ಪ್ರಶ್ನಿಸಿದರು.

ಕೇರಳದಲ್ಲೂ ಕರ್ನಾಟಕ ಮಾದರಿ ಗ್ಯಾರಂಟಿ ಯೋಜನೆಗಳನ್ನು ಘೋಷಣೆ ಮಾಡಲಾಗುತ್ತಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಶಿವಕುಮಾರ್, ಕರ್ನಾಟಕ ಕಾಂಗ್ರೆಸ್ ಅಧ್ಯಕ್ಷನಾಗಿ ತಾನು ಪಂಚ ಗ್ಯಾರಂಟಿ ಯೋಜನೆಗಳನ್ನು ಘೋಷಿಸಿ, ಕೊಟ್ಟ ಮಾತಿನಂತೆ ನಡೆದುಕೊಂಡಿರುವುದಾಗಿ ತಿಳಿಸಿದರು. "ಪ್ರತಿ ಮರಕ್ಕೆ ಬೇರು ಮುಖ್ಯ. ನಾವು ಬೇರನ್ನು ನಂಬಿರುವವರು. ಬೇರು ಇಲ್ಲದೆ ನಂಬಿಕೆ ಮೂಡಲು ಸಾಧ್ಯವಿಲ್ಲ. ಜನರು ನಮ್ಮನ್ನು ನಂಬಿದರು, ನಾವು ಅವರ ನಂಬಿಕೆ ಉಳಿಸಿಕೊಂಡು ನುಡಿದಂತೆ ನಡೆದಿದ್ದೇವೆ" ಎಂದು ನುಡಿದರು. ಕರ್ನಾಟಕ ಮಾತ್ರವಲ್ಲದೆ, ತೆಲಂಗಾಣ ಮತ್ತು ಹಿಮಾಚಲ ಪ್ರದೇಶದಲ್ಲೂ ಕಾಂಗ್ರೆಸ್ ಕೊಟ್ಟ ಮಾತಿನಂತೆ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದೆ ಎಂದರು. ಕೇರಳದಲ್ಲಿಯೂ ಕೊಟ್ಟಿರುವ ಭರವಸೆಯಂತೆ ಇಂದಿರಾ ಕ್ಯಾಂಟೀನ್ ಆರಂಭಿಸುವುದಾಗಿ ಅವರು ಭರವಸೆ ನೀಡಿದರು. ಕೇಂದ್ರದಲ್ಲಿ ಯುಪಿಎ ಸರ್ಕಾರ ಅಧಿಕಾರದಲ್ಲಿದ್ದಾಗ, ಆಹಾರ ಭದ್ರತೆ, ಶೈಕ್ಷಣಿಕ ಹಕ್ಕು, ಉದ್ಯೋಗ ಖಾತರಿ ಯೋಜನೆಗಳನ್ನು ಜಾರಿಗೆ ತಂದಿದ್ದನ್ನು ಅವರು ಸ್ಮರಿಸಿದರು.

Edited By : Nagaraj Tulugeri
PublicNext

PublicNext

05/04/2026 07:38 pm

Cinque Terre

43.73 K

Cinque Terre

1