ಬಾಲಿ (ಇಂಡೋನೇಷ್ಯಾ): ಬಾಲಿ ಪ್ರವಾಸದಲ್ಲಿದ್ದ ಪೋಲೆಂಡ್ ಮೂಲದ 27 ವರ್ಷದ ಕರೋಲಿನಾ ಕ್ರಿಜಾಕ್ ಎಂಬ ಯುವತಿ ಹೋಟೆಲ್ ಕೊಠಡಿಯಲ್ಲಿ ಮೃತಪಟ್ಟ ಘಟನೆ ವರದಿಯಾಗಿದೆ. ವಿಪರೀತ ಎನ್ನಿಸುವಂತಹ 'ಫ್ರುಟೇರಿಯನ್ ಡಯಟ್' (ಕೇವಲ ಹಣ್ಣುಗಳನ್ನು ಮಾತ್ರ ಸೇವಿಸುವ ಆಹಾರ ಪದ್ಧತಿ) ಅನುಸರಿಸುತ್ತಿದ್ದುದೇ ಆಕೆಯ ಸಾವಿಗೆ ಕಾರಣ ಎಂದು ಹೇಳಲಾಗುತ್ತಿದೆ.
ಕಳೆದ ಕೆಲವು ಸಮಯದಿಂದ ಕರೋಲಿನಾ ಕೇವಲ ಹಣ್ಣುಗಳು ಮತ್ತು ಹಣ್ಣಿನ ರಸವನ್ನು ಮಾತ್ರ ಸೇವಿಸುವ ಕಟ್ಟುನಿಟ್ಟಿನ ಆಹಾರ ಕ್ರಮವನ್ನು ಪಾಲಿಸುತ್ತಿದ್ದರು. ಈ ಬಗ್ಗೆ ಆತಂಕಗೊಂಡಿದ್ದ ಆಕೆಯ ಪೋಷಕರು, ಪೌಷ್ಟಿಕ ಆಹಾರ ಸೇವಿಸುವಂತೆ ಆಕೆಗೆ ಪದೇ ಪದೇ ಮನವಿ ಮಾಡಿದ್ದರು. ಆದರೆ, ಸೋಷಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ ನೀಡಿದ ಸಲಹೆಗಳನ್ನು ನಂಬಿದ್ದ ಕರೋಲಿನಾ, ಕೇವಲ ಹಣ್ಣುಗಳ ಸೇವನೆ ಮತ್ತು ಉಪವಾಸದಿಂದ ದೇಹಕ್ಕೆ ಒಳ್ಳೆಯದಾಗುತ್ತದೆ ಎಂದು ನಂಬಿದ್ದರು ಎನ್ನಲಾಗಿದೆ.
ಈ ಕಟ್ಟುನಿಟ್ಟಿನ ಆಹಾರ ಪದ್ಧತಿಯಿಂದಾಗಿ ಆಕೆಯ ದೇಹಕ್ಕೆ ಅಗತ್ಯವಾದ ಪ್ರೊಟೀನ್ ಮತ್ತು ಖನಿಜಾಂಶಗಳ ಕೊರತೆಯಾಗಿ, ತೀವ್ರ ಅಪೌಷ್ಟಿಕತೆಯಿಂದ ಅವರು ಮೃತಪಟ್ಟಿದ್ದಾರೆ ಎಂದು ಶಂಕಿಸಲಾಗಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವ ಅವೈಜ್ಞಾನಿಕ ಆಹಾರ ಸಲಹೆಗಳನ್ನು ಕುರುಡಾಗಿ ಅನುಸರಿಸುವುದು ಎಷ್ಟು ಅಪಾಯಕಾರಿ ಎಂಬುದಕ್ಕೆ ಈ ಘಟನೆ ಕನ್ನಡಿ ಹಿಡಿದಿದೆ. ಸದ್ಯ ಇಂಡೋನೇಷ್ಯಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಮರಣೋತ್ತರ ಪರೀಕ್ಷೆಯ ವರದಿಗಾಗಿ ಕಾಯುತ್ತಿದ್ದಾರೆ.
PublicNext
05/04/2026 10:12 pm