ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಸಾರ್ವಜನಿಕರ ಆರೋಗ್ಯದೊಂದಿಗೆ ಆಟವಾಡುತ್ತಿದ್ದ ನಕಲಿ ಟೂತ್‌ಪೇಸ್ಟ್ ತಯಾರಿಕಾ ಘಟಕವೊಂದನ್ನು ದೆಹಲಿ ಪೊಲೀಸರು ಪತ್ತೆಹಚ್ಚಿದ್ದಾರೆ.
ಪ್ರಖ್ಯಾತ ಬ್ರ್ಯಾಂಡ್ ಆದ 'ಸೆನ್ಸೊಡೈನ್' (Sensodyne) ಹೆಸರಿನಲ್ಲಿ ನಕಲಿ ಉತ್ಪನ್ನಗಳನ್ನು ತಯಾರಿಸುತ್ತಿದ್ದ ಈ ಕಾರ್ಖಾನೆಯ ಮೇಲೆ ದಾಳಿ ನಡೆಸಿರುವ ಪೊಲೀಸರು, ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ.
ಖಚಿತ ಮಾಹಿತಿಯ ಮೇರೆಗೆ ಕಾರ್ಯಾಚರಣೆ ನಡೆಸಿದ ಪೊಲೀಸರು, ಕಾರ್ಖಾನೆಯಲ್ಲಿದ್ದ 1,800 ನಕಲಿ ಸೆನ್ಸೊಡೈನ್ ಟ್ಯೂಬ್‌ಗಳು, ಖಾಲಿ ಟ್ಯೂಬ್‌ಗಳು, ಪ್ಯಾಕಿಂಗ್‌ಗಾಗಿ ಸಿದ್ಧವಿದ್ದ 10,000 ಖಾಲಿ ಟ್ಯೂಬ್‌ಗಳು ಹಾಗೂ ಮಾರಾಟಕ್ಕೆ ಸಿದ್ಧವಾಗಿದ್ದ 1,200 ಪ್ಯಾಕ್ ಮಾಡಿದ ಟ್ಯೂಬ್‌ಗಳು ಮತ್ತು ಟ್ಯೂಬ್‌ಗಳಿಗೆ ತುಂಬಲು ಇರಿಸಲಾಗಿದ್ದ ಸುಮಾರು 130 ಕೆಜಿ ತೂಕದ ರಾಸಾಯನಿಕ ಮಿಶ್ರಿತ ಪೇಸ್ಟ್ ವಶಪಡಿಸಿಕೊಂಡಿದ್ದಾರೆ.
ಈ ಅಕ್ರಮ ದಂಧೆಯ ಹಿಂದಿದ್ದ ಮಾಸ್ಟರ್‌ಮೈಂಡ್ ಹಾಗೂ ಕಾರ್ಖಾನೆಯ ಮಾಲೀಕ ಹರಿಯೋಮ್ ಮಿಶ್ರಾ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಈತ ಈ ನಕಲಿ ಉತ್ಪನ್ನಗಳನ್ನು ಮಾರುಕಟ್ಟೆಯಲ್ಲಿ ಅಸಲಿ ಉತ್ಪನ್ನಗಳ ಬೆಲೆಗೆ ಮಾರಾಟ ಮಾಡಿ ಸಾರ್ವಜನಿಕರಿಗೆ ಮೋಸ ಮಾಡುತ್ತಿದ್ದ ಎಂದು ತಿಳಿದುಬಂದಿದೆ.
ಹೆಸರಾಂತ ಕಂಪನಿಗಳ ಹೆಸರಿನಲ್ಲಿ ಇಂತಹ ನಕಲಿ ಉತ್ಪನ್ನಗಳು ಮಾರುಕಟ್ಟೆಗೆ ಲಗ್ಗೆ ಇಡುತ್ತಿರುವುದು ಆತಂಕಕಾರಿ ಸಂಗತಿಯಾಗಿದೆ. ಇವುಗಳಲ್ಲಿ ಬಳಸುವ ಕಳಪೆ ದರ್ಜೆಯ ರಾಸಾಯನಿಕಗಳು ಹಲ್ಲು ಮತ್ತು ಒಸಡುಗಳ ಮೇಲೆ ಗಂಭೀರ ಪರಿಣಾಮ ಬೀರಬಹುದು. ಆದ್ದರಿಂದ ಉತ್ಪನ್ನಗಳನ್ನು ಖರೀದಿಸುವಾಗ ಅಧಿಕೃತ ಮಾರಾಟಗಾರರಿಂದಲೇ ಖರೀದಿಸಿ ಹಾಗೂ ಪ್ಯಾಕೇಜಿಂಗ್ ಮೇಲಿರುವ ಲೋಗೋ ಮತ್ತು ಅಕ್ಷರಗಳನ್ನು ಗಮನಿಸಿ.
"ಜನರ ದೈನಂದಿನ ಬಳಕೆಯ ವಸ್ತುಗಳಲ್ಲಿ ಇಂತಹ ನಕಲಿ ಉತ್ಪನ್ನಗಳನ್ನು ತಯಾರಿಸುವುದು ದೊಡ್ಡ ಅಪರಾಧ. ಈ ಜಾಲದ ಹಿಂದೆ ಬೇರೆ ಯಾರಾದರೂ ಇದ್ದಾರೆಯೇ ಎಂಬ ಬಗ್ಗೆ ತನಿಖೆ ಮುಂದುವರಿದಿದೆ " ಎಂದು ಪೊಲೀಸ್ ಮೂಲಗಳು ತಿಳಿದಿವೆ.
PublicNext
03/04/2026 10:50 pm