ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಣಿಪುರದಲ್ಲಿ ಮನೆ ಮೇಲೆ ಬಾಂಬ್ ದಾಳಿ : ನಿದ್ರೆಯಲ್ಲಿದ್ದ ಇಬ್ಬರು ಮಕ್ಕಳು ಸಾವು

ಇಂಫಾಲ: ಮಣಿಪುರದ ಬಿಷ್ಣುಪುರ ಜಿಲ್ಲೆಯಲ್ಲಿ ನಡೆದ ಬಾಂಬ್ ದಾಳಿಯಲ್ಲಿ ಇಬ್ಬರು ಪುಟ್ಟ ಮಕ್ಕಳು ಪ್ರಾಣ ಕಳೆದುಕೊಂಡಿದ್ದು, ಅವರ ತಾಯಿ ಗಾಯಗೊಂಡಿದ್ದಾರೆ. ಕಳೆದ ನಾಲ್ಕು ವರ್ಷಗಳಿಂದ ನಿರಂತರ ಸಂಘರ್ಷಕ್ಕೆ ಸಾಕ್ಷಿಯಾಗಿರುವ ಮಣಿಪುರದಲ್ಲಿ, ಇಬ್ಬರು ಪುಟ್ಟ ಮಕ್ಕಳ ಪ್ರಾಣ ತೆಗೆದ ಈ ಬಾಂಬ್ ದಾಳಿ ಮತ್ತೊಮ್ಮೆ ಆತಂಕ ಮೂಡಿಸಿದೆ. 2023ರಲ್ಲಿ ಕುಕಿ ಹಾಗೂ ಮೈಥಿ ಸಮುದಾಯಗಳ ನಡುವೆ ಹುಟ್ಟಿಕೊಂಡ ದ್ವೇಷದ ಜ್ವಾಲೆಯು ಇಡೀ ಮಣಿಪುರವನ್ನೇ ಆವರಿಸಿತ್ತು. ಸಾಕಷ್ಟು ಬಾರಿ ಘರ್ಷಣೆಗಳು ನಡೆದು ನೂರಾರು ಮಂದಿ ಸಾವನ್ನಪ್ಪಿದ್ದರು. ಈಗಲೂ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತೆಯೇ ಇದೆ.

ಮಂಗಳವಾರ ಮುಂಜಾನೆ 1 ಗಂಟೆ ಸುಮಾರಿಗೆ ಬಿಷ್ಣುಪುರ ಜಿಲ್ಲೆಯ ಮೊಯಿರಾಂಗ್ ಟ್ರೋಂಗ್ಲಾಬಿ ಗ್ರಾಮದಲ್ಲಿ ಸ್ಫೋಟ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಶಂಕಿತ ಕುಕಿ ಉಗ್ರಗಾಮಿಗಳು ಹಾರಿಸಿದ ಬಾಂಬ್ ನಾಗರಿಕರ ಮನೆಯೊಂದರ ಮೇಲೆ ಬಿದ್ದಿದ್ದು, ಆ ಸಮಯದಲ್ಲಿ ಕುಟುಂಬದ ಸದಸ್ಯರು ನಿದ್ರೆಯಲ್ಲಿದ್ದರು. ಈ ಸ್ಫೋಟದಲ್ಲಿ ಐದು ವರ್ಷದ ಬಾಲಕ ಮತ್ತು ಆರು ತಿಂಗಳ ಬಾಲಕಿ ತಮ್ಮ ಮಲಗುವ ಕೋಣೆಯೊಳಗೆ ಸಾವನ್ನಪ್ಪಿದ್ದಾರೆ. ಆ ಸಮಯದಲ್ಲಿ ಕೋಣೆಯಲ್ಲಿದ್ದ ಅವರ ತಾಯಿ ಕೂಡ ದಾಳಿಯಲ್ಲಿ ಗಾಯಗೊಂಡಿದ್ದು, ಪ್ರಸ್ತುತ ಚಿಕಿತ್ಸೆ ಪಡೆಯುತ್ತಿದ್ದಾರೆ.

ಚುರಚಂದ್‌ಪುರದ ಬೆಟ್ಟ ಪ್ರದೇಶಗಳ ಬಳಿ ಇರುವ ತಗ್ಗು ಪ್ರದೇಶವಾದ ಮೊಯಿರಾಂಗ್ ಟ್ರೋಂಗ್ಲಾಬಿ, 2023 ಮತ್ತು 2024 ರಲ್ಲಿ ಪದೇ ಪದೇ ಗುಂಡಿನ ಚಕಮಕಿ ಹಾಗೂ ಹಿಂಸಾಚಾರಕ್ಕೆ ಸಾಕ್ಷಿಯಾಗಿದೆ. ಇತ್ತೀಚಿನ ಈ ದಾಳಿಯು ಈ ಪ್ರದೇಶದಲ್ಲಿ ನಿರಂತರ ಹಿಂಸಾಚಾರದ ಬಗ್ಗೆ ಕಳವಳವನ್ನು ಮತ್ತಷ್ಟು ಹೆಚ್ಚಿಸಿದೆ.

Edited By :
PublicNext

PublicNext

07/04/2026 01:16 pm

Cinque Terre

12.79 K

Cinque Terre

0

ಸಂಬಂಧಿತ ಸುದ್ದಿ