ಕಾನ್ಪುರದಲ್ಲಿ ವೈದ್ಯೋ ನಾರಾಯಣೋ ಹರಿ ಎಂಬ ಮಾತನ್ನೇ ಮರೆತು, ಮಾನವೀಯತೆಯನ್ನೇ ಬಲಿಕೊಟ್ಟಿದ್ದ ಬೃಹತ್ ಕಿಡ್ನಿ ದಂಧೆ ಜಾಲವನ್ನು ಪೊಲೀಸರು ಭೇದಿಸಿದ್ದಾರೆ. ಈ ಅಕ್ರಮ ದಂಧೆಯ ಪ್ರಮುಖ ಸೂತ್ರಧಾರರಲ್ಲಿ ಒಬ್ಬನಾದ ಮೀರತ್‌ನ ಡಾ. ಅಫ್ಜಲ್‌ನ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಾರ್ವಜನಿಕರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ಹೌದು ಬಡತನದ ಸುಳಿಗೆ ಸಿಲುಕಿದ್ದ MBA ವಿದ್ಯಾರ್ಥಿಯ ಕಿಡ್ನಿಯನ್ನು ಕೇವಲ 6 ಲಕ್ಷಕ್ಕೆ ಖರೀದಿಸಿ, ಅದೇ ಕಿಡ್ನಿಯನ್ನು ಶ್ರೀಮಂತ ಮಹಿಳೆಗೆ 80 ಲಕ್ಷ ರೂಪಾಯಿಗೆ ಮಾರಾಟ ಮಾಡಿ, ಆ ಹಣದ ಮೇಲೆ ರಾಜಾರೋಷವಾಗಿ ಮಲಗಿ ಅಟ್ಟಹಾಸ ಮೆರೆದಿದ್ದ ಮೀರತ್‌ನ ಡಾ. ಅಫ್ಜಲ್‌ನ ವಿಡಿಯೋ ವೈರಲ್ ಆಗಿದೆ.
ದಂಧೆಕೋರರು ಬಡತನದ ಸುಳಿಗೆ ಸಿಲುಕಿದ್ದ ಬಿಹಾರ ಮೂಲದ MBA ವಿದ್ಯಾರ್ಥಿಯೊಬ್ಬನನ್ನು ತಮ್ಮ ಬಲೆಗೆ ಕೆಡವಿಕೊಂಡಿದ್ದರು. "ಅಮಿತಾಭ್ ಬಚ್ಚನ್ ಅವರೇ ಒಂದು ಕಿಡ್ನಿಯಲ್ಲಿ ಬದುಕುತ್ತಿದ್ದಾರೆ, ನೀವೇಕೆ ಕೊಡಬಾರದು?" ಎಂದು ಮಂಕುಬೂದಿ ಎರಚಿ, ಆತನ ಕಿಡ್ನಿಯನ್ನು ಕೇವಲ 6 ಲಕ್ಷ ರೂಪಾಯಿಗೆ ಖರೀದಿಸಿದ್ದರು. ಆದರೆ, ಇದೇ ಕಿಡ್ನಿಯನ್ನು ಶ್ರೀಮಂತ ಮಹಿಳೆಯೊಬ್ಬರಿಗೆ ಬರೋಬ್ಬರಿ 80 ಲಕ್ಷ ರೂಪಾಯಿಗೆ ಮಾರಾಟ ಮಾಡಿರುವುದು ಪೊಲೀಸರ ತನಿಖೆಯಿಂದ ಬಯಲಾಗಿದೆ.
ಕಾನ್ಪುರ ಪೊಲೀಸರು ನಗರದ ಸುಮಾರು ಆರು ಆಸ್ಪತ್ರೆಗಳ ಮೇಲೆ ಏಕಕಾಲಕ್ಕೆ ದಾಳಿ ನಡೆಸಿ, ಅಕ್ರಮ ಕಿಡ್ನಿ ಕಸಿ ಜಾಲವನ್ನು ಪತ್ತೆಹಚ್ಚಿದ್ದಾರೆ. ಈವರೆಗೆ ಆರು ಆರೋಪಿಗಳನ್ನು ಬಂಧಿಸಲಾಗಿದ್ದು, ಅವರಲ್ಲಿ ಅಹೂಜಾ ಆಸ್ಪತ್ರೆಯ ಮಾಲೀಕ ದಂಪತಿನೂ ಸೇರಿದ್ದಾರೆ. ಆದರೆ, ಡಾ. ಅಫ್ಜಲ್ ಸೇರಿದಂತೆ ಇನ್ನೂ ನಾಲ್ವರು ಪ್ರಮುಖ ವೈದ್ಯರು ತಲೆಮರೆಸಿಕೊಂಡಿದ್ದಾರೆ.
ಸದ್ಯ ತಲೆಮರೆಸಿಕೊಂಡಿರುವ ಡಾ. ಅಫ್ಜಲ್‌ನ ವೈರಲ್ ವಿಡಿಯೋದಲ್ಲಿ, ಆತ ಸುಮಾರು 15 ಲಕ್ಷಕ್ಕೂ ಹೆಚ್ಚು ಮೌಲ್ಯದ ನೋಟುಗಳನ್ನು ಹಾಸಿಗೆಯಂತೆ ಹರಡಿಕೊಂಡು ಅದರ ಮೇಲೆ ರಾಜಾರೋಷವಾಗಿ ಮಲಗಿದ್ದಾನೆ. ಬಡವರ ಜೀವ ಹಿಂಡಿ ಗಳಿಸಿದ ಈ ಹಣದ ಮದದಲ್ಲಿ ಆತ ಮೆರೆದ ಅಟ್ಟಹಾಸವೇ ಈಗ ಆತನಿಗೆ ಮುಳುವಾಗಿದೆ. ಪೊಲೀಸರು ಮೀರತ್ ಮತ್ತು ನೋಯ್ಡಾ ಸೇರಿದಂತೆ ಹಲವೆಡೆ ಆತನಿಗಾಗಿ ತೀವ್ರ ಶೋಧ ನಡೆಸುತ್ತಿದ್ದಾರೆ.
ಪೊಲೀಸ್ ಕಮಿಷನರ್ ರಾಘುವೀರ್ ಲಾಲ್ ಈ ಕುರಿತು ಮಾತನಾಡಿ, "ಇದು ಕೇವಲ ದಂಧೆಯಲ್ಲ, ಜೀವಂತ ಮನುಷ್ಯರ ಅಂಗಾಂಗಗಳ ವ್ಯಾಪಾರ ಮಾಡುವ ಕ್ರೌರ್ಯ. ಇಂತಹ ವೈದ್ಯರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು," ಎಂದು ಎಚ್ಚರಿಕೆ ನೀಡಿದ್ದಾರೆ.
PublicNext
06/04/2026 08:49 pm