ಬೆಂಗಳೂರು: ಪೊಲೀಸ್ ಇಲಾಖೆಯಲ್ಲಿ ಮಹತ್ವದ ಆಡಳಿತಾತ್ಮಕ ಬದಲಾವಣೆಗೆ ನಾಂದಿ ಹಾಡಲಾಗಿದ್ದು, ರಾಜ್ಯ ಪೊಲೀಸ್ ಮಹಾನಿರ್ದೇಶಕ ಎಂ.ಎ.ಸಲೀಂ ಅವರು, ಆರ್ಡರ್ಲಿ ಕರ್ತವ್ಯಕ್ಕೆ ನಿಯೋಜಿಸಲಾಗಿದ್ದ ಪೊಲೀಸ್ ಸಿಬ್ಬಂದಿಯನ್ನು ತಕ್ಷಣವೇ ಬಿಡುಗಡೆ ಮಾಡುವಂತೆ ಆದೇಶ ಹೊರಡಿಸಿದ್ದಾರೆ.
ಹೌದು ಈ ಆದೇಶವು ಗೃಹ ಇಲಾಖೆಯ ಹಿಂದಿನ ನಿರ್ದೇಶನದ ಬೆನ್ನಲ್ಲೇ ಹೊರಬಿದ್ದಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಸೇರಿದಂತೆ ಹಿರಿಯ ಅಧಿಕಾರಿಗಳಿಗೆ ನಿಯೋಜಿಸಲಾಗಿದ್ದ ಆರ್ಡರ್ಲಿಗಳ ಬದಲಿಗೆ ಪರ್ಯಾಯ ವ್ಯವಸ್ಥೆಯನ್ನು ರೂಪಿಸುವಂತೆ ಗೃಹ ಇಲಾಖೆ ಸೂಚಿಸಿತ್ತು.
ಹಿಂದೆ ಪೊಲೀಸ್ ಕಾನ್‌ಸ್ಟೆಬಲ್‌ಗಳು ಅಥವಾ ಹೆಡ್‌ಕಾನ್‌ಸ್ಟೆಬಲ್‌ಗಳನ್ನು ಆರ್ಡರ್ಲಿಗಳಾಗಿ ನಿಯೋಜಿಸಲಾಗುತ್ತಿತ್ತು. ಆದರೆ, ಹೊಸ ವ್ಯವಸ್ಥೆಯ ಪ್ರಕಾರ, ಇನ್ನು ಮುಂದೆ ಹೋಮ್ ಗಾರ್ಡ್ಸ್ ಅಥವಾ ಹೊರಗುತ್ತಿಗೆ ಆಧಾರದಲ್ಲಿ ಸಿಬ್ಬಂದಿಯನ್ನು ನೇಮಿಸಿಕೊಳ್ಳಲು ಆದೇಶಿಸಲಾಗಿದೆ. ಹೊಸದಾಗಿ ಹೊರಗುತ್ತಿಗೆ ಆಧಾರದಲ್ಲಿ ನೇಮಕಗೊಳ್ಳುವ ಸಿಬ್ಬಂದಿಗೆ ನಿಗದಿತ ಆರ್ಡರ್ಲಿ ಭತ್ಯೆಯನ್ನು ನೀಡಲಾಗುವುದು ಎಂದು ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.
ಎಲ್ಲಾ ಘಟಕಾಧಿಕಾರಿಗಳು ಈ ಆದೇಶವನ್ನು ಕಡ್ಡಾಯವಾಗಿ ಪಾಲಿಸಬೇಕು. ಅಲ್ಲದೆ, ಏಪ್ರಿಲ್ 30ರೊಳಗೆ ಈ ಆದೇಶದ ಪಾಲನಾ ವರದಿಯನ್ನು ಸಲ್ಲಿಸಬೇಕು ಎಂದು ನಿರ್ದೇಶನ ನೀಡಲಾಗಿದೆ. ಈ ಆದೇಶವನ್ನು ಪೊಲೀಸ್ ಇಲಾಖೆಯ ಆಡಳಿತದಲ್ಲಿನ ಪ್ರಮುಖ ಸುಧಾರಣಾ ಕ್ರಮ ಎಂದು ಅಧಿಕಾರಿಯೊಬ್ಬರು ಬಣ್ಣಿಸಿದ್ದಾರೆ.
PublicNext
07/04/2026 12:37 pm
LOADING...