ಇಡೀ ದೇಶವನ್ನೇ ಬೆಚ್ಚಿಬೀಳಿಸಿದ್ದ ತೂತುಕುಡಿಯ ತಂದೆ-ಮಗನ ಕಸ್ಟಡಿಯಲ್ ಡೆತ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಮಧುರೈ ನ್ಯಾಯಾಲಯ ಐತಿಹಾಸಿಕ ತೀರ್ಪು ನೀಡಿದೆ. ಸರ್ಕಾರದ ನಿಯಮಗಳನ್ನೇ ಗಾಳಿಗೆ ತೂರಿ, ಅಧಿಕಾರದ ಮದದಿಂದ ಇಬ್ಬರು ಅಮಾಯಕರನ್ನು ಬಲಿ ಪಡೆದ ಒಂಬತ್ತೂ ಮಂದಿ ಪೊಲೀಸ್ ಸಿಬ್ಬಂದಿಗೆ ಮರಣದಂಡನೆ ವಿಧಿಸಲಾಗಿದೆ.
ಅದು ಜೂನ್ 19, 2020. ಕೊರೊನಾ ಲಾಕ್‌ಡೌನ್ ಕಟ್ಟುನಿಟ್ಟಾಗಿದ್ದ ಸಮಯ. ಕೇವಲ ಮೊಬೈಲ್ ಶಾಪ್ ತಡವಾಗಿ ಮುಚ್ಚಿದ್ದಾರೆ ಎನ್ನುವ ಸುಳ್ಳು ಕಾರಣಕ್ಕೆ 59 ವರ್ಷದ ಜಯರಾಜ್ ಅವರನ್ನು ಪೊಲೀಸರು ವಶಕ್ಕೆ ಪಡೆಯುತ್ತಾರೆ. ತನ್ನ ತಂದೆಯನ್ನು ಬಿಡಿಸಲು ಹೋದ 31 ವರ್ಷದ ಮಗ ಬೆನಿಕ್ಸ್ ಕೂಡ ಪೊಲೀಸರ ಕೆಂಗಣ್ಣಿಗೆ ಗುರಿಯಾಗುತ್ತಾನೆ. ಪೊಲೀಸರು ಜಯರಾಜ್ ಮತ್ತು ಬೆನಿಕ್ಸ್ ಅವರನ್ನು ಲಾಕ್‌ಅಪ್‌ಗೆ ಹಾಕಿದ ಕೂಡಲೇ ಶುರುವಾಗಿದ್ದು ಅಸಲಿ ಅಟ್ಟಹಾಸ. ಸುದೀರ್ಘ 6-7 ಗಂಟೆಗಳ ಕಾಲ ಸತತವಾಗಿ ಲಾಟಿಯಿಂದ ಬಾರಿಸಲಾಗಿದೆ. ಎಷ್ಟು ಜೋರಾಗಿ ಹೊಡೆಯಲಾಗಿತ್ತೆಂದರೆ, ಬೆನಿಕ್ಸ್ ಹಾಕಿದ್ದ ಬಟ್ಟೆಗಳು ರಕ್ತದಿಂದ ಪೂರ್ತಿ ನೆನೆದು ಹೋಗಿದ್ದವು. ಸಾತಂಕುಲಂ ಠಾಣೆಯ ಗೋಡೆಗಳು ಅಂದು ಅಮಾಯಕರ ರಕ್ತದಿಂದ ಕೆಂಪಾಗಿದ್ದವು. ನೆಲದ ಮೇಲೆ ಮತ್ತು ಗೋಡೆಗಳ ಮೇಲೆ ಚಿಮ್ಮಿದ್ದ ತಮ್ಮದೇ ರಕ್ತವನ್ನು, ಸಂತ್ರಸ್ತರು ತಾವು ಹಾಕಿದ್ದ ಬಟ್ಟೆಯಿಂದಲೇ ಒರೆಸುವಂತೆ ಪೊಲೀಸರು ಆರ್ಡರ್ ಮಾಡಿದ್ದರು.
ಕೇವಲ ಲಾಟಿಯಿಂದ ಹೊಡೆಯುವುದು ಮಾತ್ರವಲ್ಲದೆ, ತಂದೆ ಮತ್ತು ಮಗ ಇಬ್ಬರ ಮೇಲೂ ಲೈಂಗಿಕ ದೌರ್ಜನ್ಯ ಎಸಗಲಾಗಿತ್ತು. ಜೈಲಿಗೆ ಕಳುಹಿಸುವಾಗ ಈ ಇಬ್ಬರಿಗೂ ವಿಪರೀತ ರಕ್ತಸ್ರಾವವಾಗುತ್ತಿತ್ತು. ಜೈಲು ಅಧಿಕಾರಿಗಳು ಇವರನ್ನು ದಾಖಲಿಸಿಕೊಳ್ಳಲು ಹಿಂಜರಿಯುವಷ್ಟು ಇವರ ಸ್ಥಿತಿ ಶೋಚನೀಯವಾಗಿತ್ತು. ದಾರಿಯುದ್ದಕ್ಕೂ ಅವರು ರಕ್ತದ ಮಡುವಿನಲ್ಲೇ ಕುಳಿತಿದ್ದರು. ಪೊಲೀಸರ ಅಟ್ಟಹಾಸಕ್ಕೆ ಇಬ್ಬರು ಜೀವಗಳು ಬಲಿಯಾದವು.
ಅಷ್ಟಕ್ಕೂ ಈ ಪ್ರಕರಣಕ್ಕೆ ಜೀವ ತುಂಬಿದ್ದು ಮಹಿಳಾ ಕಾನ್‌ಸ್ಟೆಬಲ್ ರೇವತಿ ಅವರ ಸಾಕ್ಷಿ ನುಡಿ. ಇಡೀ ಇಲಾಖೆಯೇ ಸತ್ಯವನ್ನು ಮುಚ್ಚಿ ಹಾಕಲು ಯತ್ನಿಸುತ್ತಿದ್ದಾಗ, ರೇವತಿ ಅವರು ಪೊಲೀಸರ ಅಸಲಿ ಮುಖವಾಡವನ್ನು ಬಯಲು ಮಾಡಿದರು. ಘಟನೆ ಸಂಬಂಧ
1. ಇನ್ಸ್‌ಪೆಕ್ಟರ್ ಎಸ್. ಶ್ರೀಧರ್
2. ಸಬ್ ಇನ್ಸ್‌ಪೆಕ್ಟರ್ ರಘು ಗಣೇಶ್
3. ಸಬ್ ಇನ್ಸ್‌ಪೆಕ್ಟರ್ ಬಾಲಕೃಷ್ಣನ್
4. ಹೆಡ್ ಕಾನ್‌ಸ್ಟೆಬಲ್ ಮುರುಗನ್
5. ಹೆಡ್ ಕಾನ್‌ಸ್ಟೆಬಲ್ ಸಾಮಿ ದೊರೈ
6. ಕಾನ್‌ಸ್ಟೆಬಲ್ ಮುತ್ತುರಾಜ
7. ಕಾನ್‌ಸ್ಟೆಬಲ್ ವೈಲ್ ಮುತ್ತು
8. ಕಾನ್‌ಸ್ಟೆಬಲ್ ಚೆಲ್ಲ ದೊರೈ
9. ಕಾನ್‌ಸ್ಟೆಬಲ್ ಥಾಮಸ್ ಫ್ರಾನ್ಸಿಸ್ ಗೆ ಗಲ್ಲು ಶಿಕ್ಷೆ ವಿಧಿಸಲಾಗಿದೆ.
ಈ ತೀರ್ಪು ಕೇವಲ ತಮಿಳುನಾಡು ಪೊಲೀಸರಿಗೆ ಮಾತ್ರವಲ್ಲ, ದೇಶದ ಪ್ರತಿಯೊಬ್ಬ 'ಖಾಕಿ' ತೊಟ್ಟ ಅಧಿಕಾರಿಗೆ ಪಾಠವಾಗಲಿ. ಬಡವರ, ಅಮಾಯಕರ ಧ್ವನಿಯನ್ನು ಅಡಗಿಸಲು ಹೊರಟರೆ ನ್ಯಾಯಾಲಯ ಸುಮ್ಮನಿರುವುದಿಲ್ಲ ಎಂಬುದು ಇಂದಿನ ಈ 'ಲ್ಯಾಂಡ್‌ಮಾರ್ಕ್ ಜಡ್ಜ್‌ಮೆಂಟ್' ಸಾಬೀತುಪಡಿಸಿದೆ.
PublicNext
07/04/2026 02:17 pm