ವಿಜಯಪುರ : ಕೂಡಲಸಂಗಮ ಪಂಚಮಸಾಲಿ ಪೀಠದ ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿಗಳು ಬೆಂಗಳೂರು ಮೂಲದ ನಾಲ್ವರ ವಿರುದ್ಧ ವಿಜಯಪುರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಕಳೆದ ಏಪ್ರಿಲ್ 4 ರಂದು ದಾಖಲಾದ ದೂರಿನಲ್ಲಿ, ತ್ರಿವೇಣಿ, ಪೃಥ್ವಿಗೌಡ, ಯಶವಂತ ಮತ್ತು ಎಂ.ಡಿ. ವೀರೇಶ್ ಎಂಬುವರು ತಮ್ಮ ಮೇಲೆ ಹಲ್ಲೆ ನಡೆಸಿ, ಬ್ಲಾಕ್‌ಮೇಲ್ ಮಾಡಿ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂದು ಸ್ವಾಮೀಜಿ ಆರೋಪಿಸಿದ್ದಾರೆ.
ಕಳೆದ ಫೆಬ್ರವರಿ 11ರಂದು ವಿಜಯಪುರ ತಾಲೂಕಿನ ಕಗ್ಗೋಡ ಬಳಿ ತಮ್ಮ ಮೇಲೆ ಮಹಿಳೆ ಹಾಗೂ ಇತರರಿಂದ ಹಲ್ಲೆ ನಡೆದಿತ್ತು ಎಂದು ಸ್ವಾಮೀಜಿ ದೂರಿನಲ್ಲಿ ವಿವರಿಸಿದ್ದಾರೆ.
ಪರಿಚಯ ಮತ್ತು ಹಣದ ಬೇಡಿಕೆ
ಸ್ವಾಮೀಜಿ ದೂರಿನಲ್ಲಿ ನೀಡಿರುವ ಮಾಹಿತಿ ಪ್ರಕಾರ, ಸುಮಾರು 2-3 ವರ್ಷಗಳ ಹಿಂದೆ ಬೆಂಗಳೂರು ಮೂಲದ ತ್ರಿವೇಣಿ ಎಂಬುವರು ತಮ್ಮ ಸಹೋದರರೊಂದಿಗೆ ಭೇಟಿಯಾಗಿದ್ದರು. ತಾನು ಲಿಂಗಾಯತ ಸಮುದಾಯಕ್ಕೆ ಸೇರಿದವಳು, 'ಆಶ್ರಿತ (ಪ್ರಗತಿ) ಫೌಂಡೇಶನ್' ಮುಖ್ಯಸ್ಥೆಯಾಗಿದ್ದು, ಬಡ ಮತ್ತು ಅನಾಥ ಮಕ್ಕಳನ್ನು ಸಾಕುತ್ತಿರುವುದಾಗಿ ಪರಿಚಯಿಸಿಕೊಂಡಿದ್ದರು. ಪಂಚಮಸಾಲಿ ಹೋರಾಟಕ್ಕೂ ಬೆಂಬಲ ನೀಡುವುದಾಗಿ ಹೇಳಿದ್ದರು.
ಕೆಲ ಸಮಯದ ನಂತರ, ತ್ರಿವೇಣಿ ತಮ್ಮ ಫೌಂಡೇಶನ್‌ಗಾಗಿ ಹಣ ನೀಡುವಂತೆ ಬೇಡಿಕೆ ಇಟ್ಟಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಸ್ವಾಮೀಜಿ, ದಾನಿಗಳಿದ್ದರೆ ಸಹಾಯ ಮಾಡಿಸುವುದಾಗಿ ತಿಳಿಸಿದ್ದರು. ಆದರೆ, ತ್ರಿವೇಣಿ ಹಣಕ್ಕಾಗಿ ನಿರಂತರವಾಗಿ ಪೀಡಿಸಲು ಪ್ರಾರಂಭಿಸಿದ್ದಳು ಎಂದು ಸ್ವಾಮೀಜಿ ಹೇಳಿದ್ದಾರೆ.
ಕಗ್ಗೋಡ ಬಳಿ ಹಲ್ಲೆ
ಸ್ವಾಮೀಜಿ ಹಣ ನೀಡಲು ನಿರಾಕರಿಸಿದಾಗ, ರಾಜಕೀಯ ವ್ಯಕ್ತಿಗಳ ಪಿತೂರಿಯಿಂದ ತಮ್ಮ ತೇಜೋವಧೆ ಮಾಡಲು ತ್ರಿವೇಣಿ ಯತ್ನಿಸುತ್ತಿದ್ದಳು ಎಂದು ಸ್ವಾಮೀಜಿ ಆರೋಪಿಸಿದ್ದಾರೆ. ಹಣ ಸಿಗದ ಕಾರಣ, ತಮ್ಮ ಮೇಲೆ ಇಲ್ಲಸಲ್ಲದ ಆರೋಪಗಳನ್ನು ಮಾಡಿ ಬ್ಲಾಕ್‌ಮೇಲ್ ಮಾಡಲು ಪ್ರಾರಂಭಿಸಿದ್ದಳು.
ಕಳೆದ ಫೆಬ್ರವರಿ 11ರಂದು ತಾವು ಕಗ್ಗೋಡದಿಂದ ಹಿಂತಿರುಗುತ್ತಿದ್ದಾಗ, ಆರೋಪಿಗಳು ತಮ್ಮ ವಾಹನವನ್ನು ಅಡ್ಡಗಟ್ಟಿ ಹಣಕ್ಕಾಗಿ ಬೆದರಿಕೆ ಹಾಕಿ ಬೇಡಿಕೆ ಇಟ್ಟರು. ಹಣ ನೀಡಲು ನಿರಾಕರಿಸಿದಾಗ, ಅವರ ಕಾರಿನ ಗ್ಲಾಸ್‌ಗೆ ಗುದ್ದಿ ಹಲ್ಲೆ ನಡೆಸಲಾಯಿತು. ಈ ಸಂದರ್ಭದಲ್ಲಿ ಬೆಂಗಾವಲು ಸಿಬ್ಬಂದಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು ಎಂದು ದೂರಿನಲ್ಲಿ ವಿವರಿಸಲಾಗಿದೆ.
ಅಪಪ್ರಚಾರ ಮತ್ತು ಬ್ಲಾಕ್‌ಮೇಲ್ ಬೆದರಿಕೆ
ಸ್ವಾಮೀಜಿಗಳ ಪ್ರಕಾರ, ಆರೋಪಿಗಳು ಕೆಲವು ಮಾಧ್ಯಮಗಳು ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ವಿರುದ್ಧ ಅಪಪ್ರಚಾರ ನಡೆಸಿದ್ದಾರೆ. ಈ ಕುರಿತು ಸಿಟಿ ಸಿವಿಲ್ ನ್ಯಾಯಾಲಯದಿಂದ ತಡೆಯಾಜ್ಞೆ ತರಲಾಗಿದ್ದರೂ, ಖಾಸಗಿ ವಾಹಿನಿಯೊಂದರಲ್ಲಿ ತಮ್ಮ ವಿರುದ್ಧ ಅಪಪ್ರಚಾರ ಮುಂದುವರಿಸಿದ್ದಾರೆ ಎಂದು ಸ್ವಾಮೀಜಿ ಹೇಳಿದ್ದಾರೆ.
ಇದಲ್ಲದೆ, ತ್ರಿವೇಣಿ ತಮ್ಮ ಶಿಷ್ಯ ರಾಜಕುಮಾರ್ ಸಿ.ಎಂ. ಅವರ ಮೊಬೈಲ್‌ಗೆ ಕರೆ ಮಾಡಿ, 3 ಕೋಟಿ ರೂಪಾಯಿ ಹಣಕ್ಕೆ ಬೇಡಿಕೆಯಿಟ್ಟಿದ್ದಾಳೆ. ಹಣ ನೀಡದಿದ್ದರೆ ಮಾಧ್ಯಮ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಸ್ವಾಮೀಜಿ ಬಗ್ಗೆ ಕೆಟ್ಟದಾಗಿ ಪ್ರಚಾರ ಮಾಡುವುದಲ್ಲದೆ, ಅತ್ಯಾಚಾರದ ಕೇಸ್ ಹಾಕುವುದಾಗಿ ಬೆದರಿಕೆ ಹಾಕಿದ್ದಾಳೆ ಎಂದು ದೂರಿನಲ್ಲಿ ಪ್ರಮುಖವಾಗಿ ಉಲ್ಲೇಖಿಸಲಾಗಿದೆ.
ವಿಜಯಪುರ ಗ್ರಾಮೀಣ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ರಾಯಗೊಂಡ ಜಾನಾರ್ ಅವರು ಸ್ವಾಮೀಜಿ ನೀಡಿದ ದೂರು ಸ್ವೀಕರಿಸಿ, ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.
PublicNext
07/04/2026 04:14 pm