ವಿಶ್ವದ ಯೋಗ ರಾಜಧಾನಿ, ಗಂಗಾ ತಟದ ಪವಿತ್ರ ನಗರಿ ಋಷಿಕೇಶ ಎಂದರೆ ನೆನಪಾಗುವುದು ಮನಸ್ಸಿಗೆ ಸಿಗುವ ಶಾಂತಿ ಮತ್ತು ಆಧ್ಯಾತ್ಮಿಕ ಅನುಭವ. ಆದರೆ, ಇತ್ತೀಚಿನ ದಿನಗಳಲ್ಲಿ ಈ ಪವಿತ್ರ ನಗರದ ಚಿತ್ರಣ ಸಂಪೂರ್ಣವಾಗಿ ಬದಲಾಗುತ್ತಿದೆ. ಶಾಂತಿ ಹುಡುಕಿ ಬರುವ ಪ್ರವಾಸಿಗರ ತಾಣವೀಗ ಸದಾ ಕಿರಿಕ್ ಮತ್ತು ಹೊಡೆದಾಟಗಳ ಸುದ್ದಿಯಿಂದಲೇ ಹೆಚ್ಚು ಸುದ್ದಿಯಾಗುತ್ತಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋಗಳು ಮತ್ತು ಸ್ಥಳೀಯರ ಪ್ರಕಾರ, ಋಷಿಕೇಶ ತನ್ನ ಹಳೆಯ ಗರಿಮೆಯನ್ನು ಕಳೆದುಕೊಳ್ಳುತ್ತಿದೆ. ಒಂದು ಕಾಲದಲ್ಲಿ ಮೌನ ಮತ್ತು ಜಪ-ತಪಗಳಿಗೆ ಸಾಕ್ಷಿಯಾಗುತ್ತಿದ್ದ ಈ ಸುಂದರ ತಾಣದಲ್ಲಿ ಈಗ ದಿನಬೆಳಗಾದರೆ ಸಾಕು ಪ್ರವಾಸಿಗರ ನಡುವಿನ ಜಗಳ ಅಥವಾ ಸ್ಥಳೀಯರೊಂದಿಗೆ ಕಿರಿಕ್ ಮಾಡಿಕೊಳ್ಳುವ ದೃಶ್ಯಗಳು ಮುನ್ನೆಲೆಗೆ ಬರುತ್ತಿವೆ.
ಪ್ರವಾಸಿಗರ ಅತಿಯಾದ ದಟ್ಟಣೆ ಮತ್ತು ಅಶಿಸ್ತಿನ ವರ್ತನೆಯಿಂದಾಗಿ ಸಣ್ಣಪುಟ್ಟ ವಿಚಾರಗಳಿಗೂ ಹೊಡೆದಾಟಗಳು ನಡೆಯುತ್ತಿವೆ. ಇದಕ್ಕೆ ಸಂಬಂಧಿಸಿದ ವಿಡಿಯೋಗಳು ಅಂತರಾಷ್ಟ್ರೀಯ ಮಟ್ಟದಲ್ಲೂ ಋಷಿಕೇಶದ ಹೆಸರಿಗೆ ಮಸಿ ಬಳಿಯುತ್ತಿವೆ. ಶಾಂತಿ ಮತ್ತು ಸುಖದ ಹುಡುಕಾಟದಲ್ಲಿ ಬರುತ್ತಿದ್ದ ಜನರಿಗೆ ಈಗ ಅಲ್ಲಿನ ಗದ್ದಲ, ಟ್ರಾಫಿಕ್ ಮತ್ತು ಅಶಾಂತಿ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಪವಿತ್ರ ನಗರದ ಮರ್ಯಾದೆಯನ್ನು ಗಾಳಿಗೆ ತೂರಿ ನಡೆಯುತ್ತಿರುವ ಪಾರ್ಟಿ ಸಂಸ್ಕೃತಿ ಮತ್ತು ಅನುಚಿತ ವರ್ತನೆಗಳ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ. ಸದ್ಯ ಈ ವಿಡಿಯೋ ವೈರಲ್ ಆಗುತ್ತಿದ್ದು, ಋಷಿಕೇಶದ ಪವಿತ್ರತೆಯನ್ನು ಉಳಿಸಿಕೊಳ್ಳಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂಬ ಒತ್ತಾಯ ಕೇಳಿಬರುತ್ತಿದೆ.
PublicNext
07/04/2026 07:02 pm