ಮಧ್ಯಪ್ರದೇಶ: ವಯಸ್ಕ ಮಹಿಳೆಯೊಬ್ಬಳು ತನ್ನ ಇಚ್ಛೆಯಂತೆ ಯಾರ ಜೊತೆ ಬೇಕಾದರೂ ಬದುಕುವ ಹಕ್ಕನ್ನು ಹೊಂದಿದ್ದಾಳೆ ಎಂದು ಮಧ್ಯಪ್ರದೇಶ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ತನ್ನ ಪತಿಗಿಂತ 21 ವರ್ಷ ಕಿರಿಯವಳಾದ 19 ವರ್ಷದ ಯುವತಿ, ಪತಿಯನ್ನು ತೊರೆದು ಪ್ರಿಯಕರನ ಜೊತೆ ವಾಸಿಸಲು ನ್ಯಾಯಾಲಯ ಅನುಮತಿ ನೀಡಿದೆ.
ಯುವತಿಯ ಪತಿ ಸಲ್ಲಿಸಿದ್ದ ಹೇಬಿಯಸ್ ಕಾರ್ಪಸ್ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಾಲಯ ಈ ಆದೇಶ ನೀಡಿದೆ. ತನ್ನ ಪತ್ನಿ ನಾಪತ್ತೆಯಾಗಿದ್ದಾಳೆ ಮತ್ತು ಯಾರೋ ಆಕೆಯನ್ನು ಅಕ್ರಮವಾಗಿ ಕೂಡಿಟ್ಟಿದ್ದಾರೆ ಎಂದು ಪತಿ ಆರೋಪಿಸಿದ್ದರು. ಆದರೆ ನ್ಯಾಯಾಲಯದಲ್ಲಿ ಹಾಜರಾದ ಯುವತಿ ನೀಡಿದ ಹೇಳಿಕೆ ಇಡೀ ಪ್ರಕರಣಕ್ಕೆ ತಿರುವು ನೀಡಿತು.
ತನ್ನ ಪತಿ ತನಗಿಂತ 21 ವರ್ಷ ದೊಡ್ಡವನಾಗಿದ್ದು, ಈ ಮದುವೆಯಿಂದ ತಾನು ಸಂತೋಷವಾಗಿಲ್ಲ ಎಂದು ಯುವತಿ ನ್ಯಾಯಾಧೀಶರಿಗೆ ತಿಳಿಸಿದಳು. ತಾನು ಯಾರ ಒತ್ತಾಯಕ್ಕೂ ಮಣಿಯದೆ, ಸ್ವ ಇಚ್ಛೆಯಿಂದಲೇ ಪತಿಯ ಮನೆಯನ್ನು ತೊರೆದು ಪ್ರಿಯಕರನ ಜೊತೆ ಬಂದಿರುವುದಾಗಿ ಆಕೆ ಸ್ಪಷ್ಟಪಡಿಸಿದಳು. ತಾನು ಯಾವುದೇ ಅಕ್ರಮ ಬಂಧನದಲ್ಲಿಲ್ಲ ಎಂದು ಹೇಳಿದ ಯುವತಿ, ತನ್ನ ಪ್ರಿಯಕರನ ಜೊತೆ ಬದುಕಲು ಬಯಸುವುದಾಗಿ ತಿಳಿಸಿದಳು. ಯುವತಿಯ ವಾದವನ್ನು ಆಲಿಸಿದ ನ್ಯಾಯಾಲಯ, ಆಕೆ 19 ವರ್ಷದ ವಯಸ್ಕ ಮಹಿಳೆಯಾಗಿದ್ದು ತನ್ನ ಜೀವನದ ನಿರ್ಧಾರಗಳನ್ನು ತೆಗೆದುಕೊಳ್ಳುವ ಪೂರ್ಣ ಸ್ವಾತಂತ್ರ್ಯ ಹೊಂದಿದ್ದಾಳೆ ಎಂದು ಅಭಿಪ್ರಾಯಪಟ್ಟಿತು.
ವಯಸ್ಕ ಮಹಿಳೆಯ ವೈಯಕ್ತಿಕ ಸ್ವಾತಂತ್ರ್ಯವನ್ನು ಗೌರವಿಸುವುದು ನ್ಯಾಯಾಲಯದ ಕರ್ತವ್ಯ. ಆಕೆ ಯಾರ ಜೊತೆ ವಾಸಿಸಬೇಕು ಎಂಬುದನ್ನು ಆಕೆಯೇ ನಿರ್ಧರಿಸಬಹುದು ಎಂದು ಕೋರ್ಟ್ ಹೇಳಿದೆ. ಯುವತಿಯನ್ನು ಪ್ರಿಯಕರನ ಜೊತೆ ಹೋಗಲು ಅನುಮತಿಸಿದ ನ್ಯಾಯಾಲಯ, ಆಕೆಯ ಸುರಕ್ಷತೆಯ ದೃಷ್ಟಿಯಿಂದ ಮುಂದಿನ ಆರು ತಿಂಗಳ ಕಾಲ ಆಕೆಯ ಸ್ಥಿತಿಗತಿಗಳನ್ನು ಮೇಲ್ವಿಚಾರಣೆ ಮಾಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದೆ.
PublicNext
07/04/2026 07:09 pm