ಗುಜರಾತ್ : ಗುಜರಾತ್‌ನ ಪಾರ್ದಿ ಪಟ್ಟಣದಲ್ಲಿ ಘೋರ ದುರಂತವೊಂದು ಸಂಭವಿಸಿದೆ. ರಾಷ್ಟ್ರೀಯ ಹೆದ್ದಾರಿ 48ರ ಪಕ್ಕದಲ್ಲಿ ನಡೆದುಕೊಂಡು ಹೋಗುತ್ತಿದ್ದ ಮೊಬೈಲ್ ಅಂಗಡಿ ಮಾಲೀಕ ನಿಖಿಲ್ ಭಾಯ್ ಎಂಬುವವರು ಗಟಾರದ ಮೇಲಿದ್ದ ಕಾಂಕ್ರೀಟ್ ಸ್ಲ್ಯಾಬ್ ದಿಢೀರನೆ ಕುಸಿದ ಪರಿಣಾಮ ನೇರವಾಗಿ ಗಟಾರದ ಒಳಕ್ಕೆ ಬಿದ್ದಿದ್ದಾರೆ. ಈ ಎದೆ ನಡುಗಿಸುವ ಘಟನೆ ಪಾರ್ದಿ ಚಾರ್ ರಸ್ತಾ ಬಳಿ ನಡೆದಿದೆ.
ಅದೃಷ್ಟವಶಾತ್, ಗಟಾರಕ್ಕೆ ಬಿದ್ದ ನಿಖಿಲ್ ಭಾಯ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ಭೀಕರ ದೃಶ್ಯ ಅಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸ್ಪಷ್ಟವಾಗಿ ಸೆರೆಯಾಗಿದ್ದು, ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವಿಡಿಯೋದಲ್ಲಿ ಸ್ಪಷ್ಟವಾಗಿ ಕಾಣುವಂತೆ, ನಿಖಿಲ್ ಭಾಯ್ ಅವರ ಅಜಾಗರೂಕತೆಯಿಂದ ಈ ಅವಘಡ ಸಂಭವಿಸಿಲ್ಲ. ಬದಲಿಗೆ, ರಸ್ತೆಯ ಅವ್ಯವಸ್ಥೆ ಮತ್ತು ಗಟಾರದ ಮುಚ್ಚಳದ ಕಳಪೆ ಗುಣಮಟ್ಟವೇ ಈ ದುರಂತಕ್ಕೆ ಕಾರಣವಾಗಿದೆ ಎಂಬುದು ವಿಡಿಯೋದಲ್ಲಿ ಸ್ಪಷ್ಟವಾಗಿದೆ.
ರಾಷ್ಟ್ರೀಯ ಹೆದ್ದಾರಿಯಂತಹ ಅತ್ಯಂತ ಜನನಿಬಿಡ ಪ್ರದೇಶದಲ್ಲೂ ಗಟಾರದ ಮುಚ್ಚಳಗಳು ಮಾಯವಾಗಿವೆ, ಹಾಗೂ ಇರುವ ಮುಚ್ಚಳಗಳೂ ಕೂಡ ಕಿತ್ತುಬರುತ್ತಿವೆ. ಇದು ಹೆದ್ದಾರಿ ಪ್ರಾಧಿಕಾರದ ನಿರ್ಲಕ್ಷ್ಯದ ಪರಾಕಾಷ್ಠೆಯನ್ನು ಎತ್ತಿ ತೋರಿಸುತ್ತದೆ. ಸ್ಥಳೀಯ ನಿವಾಸಿಗಳು ಹೆದ್ದಾರಿ ಪ್ರಾಧಿಕಾರದ ಬೇಜವಾಬ್ದಾರಿತನದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇಂತಹ 'ಮೃತ್ಯುಕೂಪ'ಗಳು ನಗರದ ಮಧ್ಯೆ ಇರುವುದು ಸಾರ್ವಜನಿಕರ ಸುರಕ್ಷತೆಗೆ ಗಂಭೀರ ಬೆದರಿಕೆಯಾಗಿದೆ.
ಪಾರದರ್ಶಕ ಆಡಳಿತದ ನಡುವೆಯೂ ಇಂತಹ ಮೂಲಭೂತ ಸೌಕರ್ಯಗಳ ನಿರ್ಲಕ್ಷ್ಯ ನಿಜಕ್ಕೂ ದುರಂತ.
PublicNext
07/04/2026 01:35 pm