ಚೆನ್ನೈ: ತಮಿಳು ನಟಿ ಸುಭಾಷಿಣಿ, ತಮ್ಮ ಪತಿಯೊಂದಿಗೆ ವಿಡಿಯೋ ಕರೆಯಲ್ಲಿ ಮಾತನಾಡುತ್ತಿರುವಾಗಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಆಘಾತಕಾರಿ ಘಟನೆ ವರದಿಯಾಗಿದೆ. ಪತಿಯೊಂದಿಗೆ ವಿಡಿಯೋ ಕರೆಯಲ್ಲಿ ಮಾತನಾಡುತ್ತಿರುವಾಗಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಆಘಾತಕಾರಿ ಘಟನೆ ವರದಿಯಾಗಿದೆ.
ಮೂಲತಃ ಶ್ರೀಲಂಕಾ ಪ್ರಜೆಯಾದ ಸುಭಾಷಿಣಿ, 'ಸಾಸ್ವಿಬಾಲಾ' ಎಂಬ ಹೆಸರಿನಿಂದಲೂ ಗುರುತಿಸಿಕೊಂಡಿದ್ದರು. ಅವರು ಹಲವು ಧಾರಾವಾಹಿಗಳು ಮತ್ತು ಸಿನಿಮಾಗಳಲ್ಲಿ ಪೋಷಕ ನಟಿಯಾಗಿ ಕಾಣಿಸಿಕೊಂಡಿದ್ದರು. 2024ರಲ್ಲಿ ಬೆಂಗಳೂರು ಮೂಲದ ಬಿಪಿನ್ ಚಂದ್ರನ್ ಅವರನ್ನು ವಿವಾಹವಾಗಿದ್ದ ಅವರು, ಬೆಂಗಳೂರಿನಲ್ಲಿ ವಾಸವಾಗಿದ್ದರು ಎಂದು ತಿಳಿದುಬಂದಿದೆ.
ಸಿನಿಮಾ ಚಿತ್ರೀಕರಣದ ಹಿನ್ನೆಲೆಯಲ್ಲಿ ಚೆನ್ನೈನ ಪೋರೂರು ಬಳಿಯ ಅಯ್ಯಪ್ಪಂತಂಗಲ್‌ನಲ್ಲಿರುವ ಅಪಾರ್ಟ್ಮೆಂಟ್ ಒಂದನ್ನು ಸುಭಾಷಿಣಿ ಬಾಡಿಗೆಗೆ ಪಡೆದಿದ್ದರು. ಮಾರ್ಚ್ 3ರಂದು ಈ ಅಪಾರ್ಟ್ಮೆಂಟ್‌ಗೆ ಬಂದಿದ್ದ ಅವರು, ಏಪ್ರಿಲ್ 5ರ ರಾತ್ರಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಆತ್ಮಹತ್ಯೆಗೂ ಮುನ್ನ, ಅವರು ತಮ್ಮ ಪತಿ ಬಿಪಿನ್ ಚಂದ್ರನ್ ಅವರೊಂದಿಗೆ ವಿಡಿಯೋ ಕರೆಯಲ್ಲಿ ಮಾತನಾಡುತ್ತಿದ್ದರು ಎನ್ನಲಾಗಿದೆ. ಈ ವೇಳೆ ಇಬ್ಬರ ನಡುವೆ ವಾಗ್ವಾದ ನಡೆದಿದ್ದು, ವಿಡಿಯೋ ಕರೆಯಲ್ಲಿರುವಾಗಲೇ ಅವರು ನೇಣಿಗೆ ಶರಣಾಗಿದ್ದಾರೆ. ಕೂಡಲೇ ಅವರ ಪತಿ ಅಪಾರ್ಟ್ಮೆಂಟ್ ಸಿಬ್ಬಂದಿಗೆ ಕರೆ ಮಾಡಿ, ವಿಷಯ ತಿಳಿಸಿದ್ದಾರೆ.
ಸಿಬ್ಬಂದಿ ತಕ್ಷಣ ಪೋರೂರು ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ. ಸುಭಾಷಿಣಿ ಅವರ ಶವವನ್ನು ಕೆಳಗಿಳಿಸಿ, ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಯಿತಾದರೂ, ಅಷ್ಟರಲ್ಲೇ ಅವರು ಮೃತಪಟ್ಟಿದ್ದರು. ಸದ್ಯ ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಕೌಟುಂಬಿಕ ಕಲಹವೇ ಈ ದುರಂತಕ್ಕೆ ಕಾರಣವಿರಬಹುದು ಎಂದು ಪ್ರಾಥಮಿಕವಾಗಿ ಶಂಕಿಸಲಾಗಿದೆ.
PublicNext
06/04/2026 07:11 pm